ನವದೆಹಲಿ, ಜೂ. 25 (DaijiworldNews/AA): ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು(ಎನ್ಸಿಇಆರ್ಟಿ) 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ತನ್ನ 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಕುರಿತಾದ ಪ್ರತ್ಯೇಕ ಅಧ್ಯಾಯವನ್ನು ಮೊದಲ ಬಾರಿಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ 2020) ಅಡಿಯಲ್ಲಿ ಇಡೀ ದೇಶಾದ್ಯಂತ ಪರಿಷ್ಕರಿಸಲಾದ ಹೊಸ ಪಠ್ಯಪುಸ್ತಕಗಳು ಜಾರಿಗೆ ಬರುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ (2026-27) ವಿದ್ಯಾರ್ಥಿಗಳು ಇದನ್ನು ಕಲಿಯಲಿದ್ದಾರೆ.
9ನೇ ತರಗತಿಯ ಪ್ರಜಾಪ್ರಭುತ್ವ ರಾಜಕೀಯ 1 ಪಠ್ಯಪುಸ್ತಕದ 5ನೇ ಅಧ್ಯಾಯದಲ್ಲಿ ತುರ್ತು ಪರಿಸ್ಥಿತಿಯನ್ನು 'ಪ್ರಜಾಪ್ರಭುತ್ವಕ್ಕೆ ಎದುರಾದ ಸವಾಲು' ಎಂದು ವ್ಯಾಖ್ಯಾನಿಸಲಾಗಿದೆ. 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಜಾರಿಗೊಳಿಸಿದ 21 ತಿಂಗಳುಗಳ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಾಗರಿಕರ ವಾಕ್ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ಹೇಗೆ ಕಸಿದುಕೊಳ್ಳಲಾಯಿತು ಎಂಬುದನ್ನು ತಿಳಿಸಲಾಗಿದೆ.
ಪತ್ರಿಕೋದ್ಯಮದ ಕತ್ತು ಹಿಸುಕಿ, ಮಾಧ್ಯಮಗಳ ಮೇಲೆ ಅಂದಿನ ಸರ್ಕಾರ ಹೇರಿದ್ದ ಕಠಿಣ 'ಸೆನ್ಸಾರ್ಶಿಪ್' ಹಾಗೂ ವಿರೋಧ ಪಕ್ಷದ ನಾಯಕರ ಸರಣಿ ಬಂಧನಗಳ, ಈ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸರ್ಕಾರದ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಉಂಟಾದ ಸಂಘರ್ಷಗಳು ಹಾಗೂ ಗರಿಷ್ಠ ಮಟ್ಟದ ಅಧಿಕಾರ ದುರ್ಬಳಕೆಯ ವಿಚಾರವನ್ನು ವಿವರಿಸಲಾಗಿದೆ.
ಇದುವರೆಗೆ ತುರ್ತು ಪರಿಸ್ಥಿತಿಯ ಇತಿಹಾಸ ಮತ್ತು ಅದರ ರಾಜಕೀಯ ಪರಿಣಾಮಗಳ ಕುರಿತಾದ ಅಧ್ಯಾಯಗಳು ಕೇವಲ 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿ ಮಾತ್ರ ಇರುತ್ತಿದ್ದವು. ಆದರೆ ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಮಹತ್ವ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬರಬಹುದಾದ ಆಪತ್ತುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಪ್ರಜ್ಞೆ ಮೂಡಿಸುವುದು ಅತ್ಯಗತ್ಯ ಎಂಬ ಕಾರಣಕ್ಕಾಗಿ 9ನೇ ತರಗತಿಯ ಪಠ್ಯಕ್ರಮಕ್ಕೆ ಸೇರ್ಪಡೆಗೊಳಿಸಲಾಗಿದೆ.