ಬೆಂಗಳೂರು, ಜೂ. 25 (DaijiworldNews/TA): ಸೈಬರ್ ವಂಚಕರು ಈಗ ಹಣ, ಚಿನ್ನ ಅಥವಾ ಆನ್ಲೈನ್ ಖರೀದಿಗೆ ಮಾತ್ರ ಸೀಮಿತವಾಗಿಲ್ಲ. ಜನರ ದುಃಖದ ಕ್ಷಣವನ್ನೇ ಬಂಡವಾಳ ಮಾಡಿಕೊಂಡು ಶವ ಸಂಸ್ಕಾರ ಸ್ಲಾಟ್ ಬುಕ್ಕಿಂಗ್ ಹೆಸರಿನಲ್ಲಿ ವಂಚನೆ ನಡೆಸುತ್ತಿರುವ ಆತಂಕಕಾರಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ರಾಜಧಾನಿಯ ವಿದ್ಯುತ್ ಚಿತಾಗಾರಗಳಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಸ್ಲಾಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿರುವ ಸೈಬರ್ ಖದೀಮರು, ನಕಲಿ ವೆಬ್ಸೈಟ್ಗಳನ್ನು ಸೃಷ್ಟಿಸಿ ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಪತ್ತೆಯಾಗಿದೆ.
ಬೆಂಗಳೂರಿನ ವಿವಿಧ ವಿದ್ಯುತ್ ಚಿತಾಗಾರಗಳಲ್ಲಿ ಶವ ಸಂಸ್ಕಾರ ನಡೆಸಲು ಮುಂಗಡ ಸ್ಲಾಟ್ ಕಾಯ್ದಿರಿಸುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯ ಹೆಸರಿನಲ್ಲಿ ಕಿಡಿಗೇಡಿಗಳು ಅಧಿಕೃತ ವೆಬ್ಸೈಟ್ನಂತೆ ಕಾಣುವ ನಕಲಿ ತಾಣಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ.
ದುಃಖದ ಸಂದರ್ಭದಲ್ಲಿರುವ ಕುಟುಂಬಸ್ಥರು ತುರ್ತು ಅವಶ್ಯಕತೆಯಿಂದ ಸ್ಲಾಟ್ ಬುಕ್ ಮಾಡಲು ಮುಂದಾದಾಗ, ಈ ನಕಲಿ ವೆಬ್ಸೈಟ್ಗಳ ಮೂಲಕ ಹಣ ಪಾವತಿಸಿ ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯ ಚಿತಾಗಾರಗಳಲ್ಲಿ ಶವ ಸಂಸ್ಕಾರಕ್ಕಾಗಿ ಅಧಿಕೃತವಾಗಿ ರೂ. 250 ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು, ನಕಲಿ ವೆಬ್ಸೈಟ್ ಮೂಲಕ ಸಾರ್ವಜನಿಕರಿಂದ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಸಾಮಾನ್ಯ ಶುಲ್ಕಕ್ಕಿಂತ ಹಲವು ಪಟ್ಟು ಹೆಚ್ಚು ಹಣ ಪಡೆದು, ಸ್ಲಾಟ್ ಬುಕ್ಕಿಂಗ್ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ನಕಲಿ ವೆಬ್ಸೈಟ್ಗಳ ಮೂಲ, ಹಣ ವರ್ಗಾವಣೆಗೊಂಡ ಖಾತೆಗಳು ಹಾಗೂ ವಂಚನೆ ಜಾಲದ ಹಿಂದಿರುವ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಅಧಿಕಾರಿಗಳು ಶವ ಸಂಸ್ಕಾರ ಅಥವಾ ಇತರೆ ಯಾವುದೇ ನಾಗರಿಕ ಸೇವೆಗಳಿಗಾಗಿ ಹಣ ಪಾವತಿಸುವ ಮೊದಲು ಅಧಿಕೃತ ವೆಬ್ಸೈಟ್ ಮತ್ತು ಮೂಲಗಳನ್ನು ಪರಿಶೀಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಜನರ ಸಂಕಷ್ಟದ ಸಮಯವನ್ನೇ ದುರುಪಯೋಗಪಡಿಸಿಕೊಂಡು ವಂಚನೆ ನಡೆಸುತ್ತಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.