ನವದೆಹಲಿ, ಜೂ. 25 (DaijiworldNews/AA): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 5ನೇ ಅಖಿಲ ಭಾರತ ರ್ಯಾಂಕ್ ಪಡೆದು ಉತ್ತೀರ್ಣರಾದ ಇಶಾನ್ ಭಟ್ನಾಗರ್ ಅವರ ಯಶೋಗಾಥೆ ಇದು.

ಇಶಾನ್ ಭಟ್ನಾಗರ್ ಅವರು ಭೋಪಾಲ್ನ ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದರು. ನಂತರ, ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯಿಂದ ಬಿಎ ಎಲ್ಎಲ್ಬಿ (ಗೌರವ) ಪದವಿ ಪಡೆದರು. ಅಲ್ಲಿ ಅವರು ಸಾಂವಿಧಾನಿಕ ಕಾನೂನು, ಆಡಳಿತಾತ್ಮಕ ಕಾನೂನು, ಮಧ್ಯಸ್ಥಿಕೆ ಕಾನೂನು ಮತ್ತು ಸಮಾಜಶಾಸ್ತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದರು.
ಯುಪಿಎಸ್ಸಿ ಮುಖ್ಯ ಪರೀಕ್ಷೆಗಾಗಿ, ಇಶಾನ್ ಭಟ್ನಾಗರ್ ಅವರು ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡಿದ್ದರು. ಈ ಸಾಧನೆಗೂ ಮುನ್ನ, ಭಟ್ನಾಗರ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯನ್ನು ಉತ್ತೀರ್ಣರಾಗಿ 276ನೇ ಶ್ರೇಯಾಂಕವನ್ನು ಪಡೆದಿದ್ದರು. ಇದು ಅವರಿಗೆ ಐಆರ್ಎಸ್ನಲ್ಲಿ ಸ್ಥಾನವನ್ನು ತಂದುಕೊಟ್ಟಿತು. ಬಳಿಕ ಅವರು ಸಹಾಯಕ ಆದಾಯ ತೆರಿಗೆ ಆಯುಕ್ತರಾಗಿ ತರಬೇತಿಯನ್ನು ಪ್ರಾರಂಭಿಸಿದ್ದರು.
ಆದರೆ ಇಶಾನ್ ಅವರು ತಮ್ಮ ತರಬೇತಿ, ಅಧಿಕೃತ ಜವಾಬ್ದಾರಿಗಳ ನಡುವೆಯೂ, ಅವರು ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಳ್ಳುವ ದೃಢ ನಿರ್ಧಾರ ಮಾಡಿದರು. ತಮ್ಮ ಪರೀಕ್ಷಾ ತಯಾರಿ ಮುಂದುವರೆಸಿದ ಅವರು 2025ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 5ನೇ ಅಖಿಲ ಭಾರತ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.