ಪಾಟ್ನಾ, ಜೂ. 20 (DaijiworldNews/AK): ನನ್ನ ಮತ್ತು ನನ್ನ ತಂದೆ, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಹತ್ಯೆಗೆ ತಮ್ಮ ಮಾಜಿ ಆಪ್ತ ಆಕಾಶ್ ಯಾದವ್ ಸಂಚು ರೂಪಿಸಿದ್ದಾರೆ ಎಂದು ಜನಶಕ್ತಿ ಜನತಾ ದಳ ಮುಖ್ಯಸ್ಥ ಹಾಗೂ ಲಾಲು ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಗಂಭೀರ ಆರೋಪ ಮಾಡಿದ್ದಾರೆ.

ತೇಜ್ ಪ್ರತಾಪ್ ಅವರು ಈ ಬಗ್ಗೆ ದೂರು ದಾಖಲಿಸಿದ್ದು, ಆಕಾಶ್ ಯಾದವ್ , ಅವರ ಸಹೋದರಿ ಅನುಷ್ಕಾ ಯಾದವ್ ಮತ್ತು ಇತರ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ನನ್ನ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ವಿರೋಧ ಪಕ್ಷದ ಜೊತೆ ಶಾಮೀಲಾಗಿ ನನ್ನನ್ನು ಕೊಲ್ಲಲು ಸಂಚು ರೂಪಿಸಿರುವ ಸಾಧ್ಯತೆಯಿದೆ. ನನಗೆ ಮತ್ತು ತಮ್ಮ ತಂದೆಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ಮನವಿ ಮಾಡಿದ್ದಾರೆ.
ದೂರಿನಲ್ಲಿ ಅನುಷ್ಕಾ ಯಾದವ್ ಅವರ ಹೆಸರು ಸಹ ಇದೆ. ಈ ಹಿಂದೆ, ತೇಜ್ ಪ್ರತಾಪ್ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು. ಅವರೊಂದಿಗೆ ಸಂಬಂಧ ಹೊಂದಿರುವ ಆರೋಪ ಕೇಳಿಬಂದಿತ್ತು.