ಮಹಾರಾಷ್ಟ್ರ, ಜೂ. 20 (DaijiworldNews/TA): ಪರ್ಭಾನಿ ಜಿಲ್ಲೆಯ ಯಶ್ವಾಡಿ ಗ್ರಾಮದಲ್ಲಿರುವ ದೇವಾಲಯದಲ್ಲಿ ಶನಿವಾರ ಭೀಕರ ಅವಘಡ ಸಂಭವಿಸಿದ್ದು, ಗರ್ಭಗುಡಿಯ ಮುಂಭಾಗದ ಸಭಾ ಮಂಟಪದ ಛಾವಣಿ ಕುಸಿದು ಸುಮಾರು 20 ಭಕ್ತರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಮಧ್ಯಾಹ್ನ ಸುಮಾರು 3.30ರ ವೇಳೆಗೆ ಈ ಘಟನೆ ನಡೆದಿದ್ದು, ದೇವಾಲಯದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಛಾವಣಿಯ ಸ್ಲ್ಯಾಬ್ ಏಕಾಏಕಿ ಕುಸಿದು ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಘಡದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಅವಶೇಷಗಳಡಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆಯಲು ಕಾರ್ಯಾಚರಣೆ ಮುಂದುವರಿದಿದೆ. ಅವಘಡದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪರ್ಭಾನಿ ಜಿಲ್ಲಾ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಯಶ್ವಾಡಿ ಗ್ರಾಮದಲ್ಲಿರುವ ಈ ದೇವಾಲಯವು ಛತ್ರಪತಿ ಸಂಭಾಜಿನಗರದಿಂದ ಸುಮಾರು 190 ಕಿಲೋಮೀಟರ್ ದೂರದಲ್ಲಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ನಿರ್ಮಾಣ ಕಾಮಗಾರಿಯ ವೇಳೆ ಸುರಕ್ಷತಾ ಕ್ರಮಗಳಲ್ಲಿ ಲೋಪ ಉಂಟಾಗಿದೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕವೇ ಹಾನಿಯ ಪ್ರಮಾಣ ಮತ್ತು ಸಿಲುಕಿರುವವರ ನಿಖರ ಸಂಖ್ಯೆ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.