ನವದೆಹಲಿ, ಜೂ. 20 (DaijiworldNews/AK): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಟೀಕಿಸಿದ್ದಾರೆ. ಆದರೆ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಮಾತ್ರ ಪ್ರಧಾನಿ ಮೋದಿಯವರ ನಿಲುವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಶಶಿ ತರೂರ್ ಅವರ ಈ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವದ ವಿರುದ್ಧ ಕಟು ವಾಗ್ದಾಳಿ ನಡೆಸಿದೆ.

ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಶಶಿ ತರೂರ್ ಅವರ ಹೇಳಿಕೆಗಳು ರಾಹುಲ್ ಗಾಂಧಿಗೆ ಸಿಕ್ಕ ಜನ್ಮದಿನದ ಉಡುಗೊರೆಯಾಗಿದೆ. ಈ ಹೇಳಿಕೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಯ ಸುಳ್ಳು ನಿರೂಪಣೆಯನ್ನು ಧ್ವಂಸಗೊಳಿಸಿದೆ ಎಂದು ಹೇಳಿದ್ದಾರೆ.
ನಿನ್ನೆ ರಾಹುಲ್ ಗಾಂಧಿ ಅವರ ಜನ್ಮದಿನವಾಗಿತ್ತು. ಸಂಸದ ಶಶಿ ತರೂರ್ ಅವರು ರಾಹುಲ್ ಗಾಂಧಿಯವರ ಸುಳ್ಳು ನಿರೂಪಣೆಯನ್ನು ಬಯಲು ಮಾಡುವ ಮೂಲಕ ಜನ್ಮದಿನದ ಉಡುಗೊರೆಯನ್ನು ನೀಡಿದ್ದಾರೆ ಎಂದು ಪೂನಾವಾಲಾ ಬರೆದಿದ್ದಾರೆ.
ಹಾಗೇ, “ರಾಹುಲ್ ಗಾಂಧಿ ಅವರು ಶಶಿ ತರೂರ್ ಅವರನ್ನು ಪಕ್ಷದಿಂದ ವಜಾ ಮಾಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಪೂನಾವಾಲಾ ವ್ಯಂಗ್ಯವಾಡಿದ್ದಾರೆ.
ನಿನ್ನೆ ರಾಹುಲ್ ಗಾಂಧಿ ಅವರ ಜನ್ಮದಿನವಾಗಿದ್ದರೂ ಅವರಿಗೆ ಯಾವುದೇ ಉಡುಗೊರೆಗಳು ಸಿಗದಿರುವುದು ಮುಜುಗರದ ಸಂಗತಿ. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೇ ಪ್ರಧಾನಿ ಮೋದಿಯವರನ್ನು ಶ್ಲಾಘಿಸುವ ನಿಲುವು ತಳೆದಿದ್ದಾರೆ. ಇದು ರಾಹುಲ್ ಗಾಂಧಿ ಸಾರ್ವಜನಿಕ ಬೆಂಬಲವನ್ನು ಕಳೆದುಕೊಂಡಿರುವುದನ್ನು ತೋರಿಸುತ್ತದೆ ಎಂದು ಪೂನಾವಾಲಾ ಹೇಳಿದ್ದಾರೆ.