ಕೊಚ್ಚಿ, ಜೂ. 20 (DaijiworldNews/TA): ಸಾಮಾಜಿಕ ಜಾಲತಾಣಗಳಲ್ಲಿ ‘ಕುಂಭಮೇಳ ವೈರಲ್ ಸ್ಟಾರ್’ ಎಂದು ಗುರುತಿಸಿಕೊಂಡಿರುವ ಯುವತಿಗೆ ಜೀವ ಬೆದರಿಕೆ ಇರುವುದಾಗಿ ಸಲ್ಲಿಸಲಾದ ಅರ್ಜಿಯ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಯುವತಿಯ ಭದ್ರತೆಯನ್ನು ಖಚಿತಪಡಿಸುವಂತೆ ಕೊಚ್ಚಿ ಕೇಂದ್ರ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ತಾನು ಕೇರಳದಲ್ಲಿರುವುದರಿಂದ ಸುರಕ್ಷಿತವಾಗಿದ್ದು, ಮಧ್ಯಪ್ರದೇಶಕ್ಕೆ ತೆರಳಿದರೆ ಮರ್ಯಾದಾ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಯುವತಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ತನ್ನ ಮೊಬೈಲ್ಗೆ ಬಂದಿರುವ ಬೆದರಿಕೆ ಸಂದೇಶಗಳ ಸ್ಕ್ರೀನ್ಶಾಟ್ಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾಳೆ. ಮಾರ್ಚ್ 11ರಂದು ತಿರುವನಂತಪುರದ ಅರುಮನೂರ್ ಶ್ರೀ ನೈನಾರ್ ದೇವ ದೇವಸ್ಥಾನದಲ್ಲಿ ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಫರ್ಮಾನ್ ಅವರೊಂದಿಗೆ ಯುವತಿಯ ವಿವಾಹ ನಡೆದಿತ್ತು. ಆದರೆ, ಮದುವೆಯ ಸಮಯದಲ್ಲಿ ಯುವತಿಗೆ 16 ವರ್ಷ ವಯಸ್ಸು ಮಾತ್ರ ಇತ್ತು ಎಂದು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.
ಮಹೇಶ್ವರ ಸರ್ಕಾರಿ ಆಸ್ಪತ್ರೆಯ ಜನನ ಪ್ರಮಾಣಪತ್ರದಲ್ಲಿ ಯುವತಿಯ ಜನ್ಮ ದಿನಾಂಕ ಡಿಸೆಂಬರ್ 30, 2009 ಎಂದು ದಾಖಲಾಗಿರುವುದಾಗಿ ವರದಿಯಾಗಿದೆ. ಆದರೆ ಈ ದಾಖಲೆ ಸುಳ್ಳು ಎಂದು ಯುವತಿ ವಾದಿಸಿದ್ದು, ತಾನು ಪೊಲೀಸರಿಗೆ ಸಲ್ಲಿಸಿದ ದಾಖಲೆಗಳಲ್ಲಿ ಜನ್ಮ ದಿನಾಂಕ ಜನವರಿ 1, 2008 ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾಳೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಚಿವ ವಿ. ಶಿವನ್ಕುಟ್ಟಿ, ಸಂಸದ ಎ.ಎ. ರಹೀಮ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಈ ವಿವಾಹ ನಡೆದಿತ್ತು. ನಂತರ ವಯಸ್ಸಿನ ಕುರಿತ ವಿವಾದ ಹೊರಬಿದ್ದ ಹಿನ್ನೆಲೆಯಲ್ಲಿ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಪ್ರಾಥಮಿಕ ತನಿಖೆಯಲ್ಲಿ, ಯುವತಿ ಸಲ್ಲಿಸಿದ್ದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳ ಪರಿಶೀಲನೆಯ ಬಳಿಕವೇ ವಿವಾಹ ನೆರವೇರಿಸಲಾಗಿದೆ ಎಂಬ ಮಾಹಿತಿ ಹೊರಬಂದಿದೆ.
ಯುವತಿಯ ಪೋಷಕರು ನೀಡಿದ ದೂರಿನ ಮೇರೆಗೆ ಮಧ್ಯಪ್ರದೇಶ ಪೊಲೀಸರು ಕೊಚ್ಚಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿಯ ಪತಿ ಮೊಹಮ್ಮದ್ ಫರ್ಮಾನ್, ತನ್ನ ಪತ್ನಿ ಗರ್ಭಿಣಿಯಾಗಿದ್ದು ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ವಯಸ್ಸಿನ ಕುರಿತ ದಾಖಲೆಗಳ ಬಗ್ಗೆ ಇನ್ನೂ ಅನುಮಾನಗಳು ಇರುವ ಕಾರಣ ನ್ಯಾಯಾಲಯವು ಫರ್ಮಾನ್ ಅವರ ಬಂಧನಕ್ಕೆ ತಾತ್ಕಾಲಿಕ ತಡೆ ನೀಡಿದೆ. ಈ ನಡುವೆ, ಯುವತಿಯ ಜೀವಭದ್ರತೆಯ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಅಗತ್ಯ ಪೊಲೀಸ್ ರಕ್ಷಣೆ ಒದಗಿಸುವಂತೆ ಆದೇಶಿಸಿದೆ.