ಶ್ರೀನಗರ, ಜೂ. 12 (DaijiworldNews/AA): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ನ ನಿಯಂತ್ರಣ ರೇಖೆಯ (ಎಲ್ಒಸಿ) ಬಳಿ ತರಬೇತಿ ವೇಳೆ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ಬಿಹಾರ ಬೆಟಾಲಿಯನ್ನ ಲ್ಯಾನ್ಸ್ ನಾಯಕ್ ರವೀಂದರ್ ಭೇರಾ ಮತ್ತು ಅಗ್ನಿವೀರ್ ಶಕ್ತಿ ಪ್ರಸಾದ್ ಗಾಯಗೊಂಡ ಸೈನಿಕರು.
ಎಲ್ಒಸಿಗೆ ಸಮೀಪವಿರುವ ಮಾಲ್ಟಿ ಸೆಕ್ಟರ್ನಲ್ಲಿರುವ ಆರ್ಮಿ ಫಾರ್ವರ್ಡ್ ಪೋಸ್ಟ್ ಬಳಿ ಈ ಅವಘಡ ಸಂಭವಿಸಿದೆ. ಸೇನಾ ಸಿಬ್ಬಂದಿ ದಿನನಿತ್ಯದ ತರಬೇತಿ ಮತ್ತು ಶಸ್ತ್ರಾಸ್ತ್ರ ನಿರ್ವಹಣೆ ಕವಾಯತು ನಡೆಸುತ್ತಿದ್ದಾಗ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಪರಿಣಾಮ ಇಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಪೂಂಚ್ನ 425 ಫೀಲ್ಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಉಧಂಪುರದಲ್ಲಿರುವ ಉತ್ತರ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.