ಶ್ರೀನಗರ, ಜೂ. 12 (DaijiworldNews/AA): ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರನ್ನು ಅಳಿಯಂದಿರಂತೆ ನಡೆಸಿಕೊಂಡು, ನಾಗರಿಕರನ್ನು ಕಗ್ಗೊಲೆ ಮಾಡಲಾಗ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್ಪಿ ವೈದ್ ಕಿಡಿಕಾರಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, "ಜಾಗತಿಕ ಭಯೋತ್ಪಾದಕರಾದ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ರನ್ನು ಅಳಿಯಂದಿರಂತೆ ಪಾಕ್ ನಡೆಸಿಕೊಳ್ಳುತ್ತಿದೆ. ಅವರಿಗೆ ವಿವಿಐಪಿ ಸ್ಥಾನಮಾನ ನೀಡಲಾಗಿದೆ. ಅವರು ಭಯವಿಲ್ಲದೆ ಸರ್ಕಾರದ ಭದ್ರತೆಯಲ್ಲಿ ಓಡಾಡುತ್ತಿದ್ದಾರೆ. ಆದರೆ ಶಾಂತಿಯುತ ನಾಗರಿಕ ಸಮಾಜದ ನಾಯಕರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗುತ್ತಿದೆ. ಅಂತವರ ಪತ್ತೆಗೆ ನಗದು ಬಹುಮಾನ ಘೋಷಿಸಲಾಗಿದೆ. ಇದು ಆಘಾತಕಾರಿ ಬೆಳವಣಿಗೆ" ಎಂದು ಹೇಳಿದರು.
"ಹಣದುಬ್ಬರ, ಹಕ್ಕುಗಳು ಮತ್ತು ಆಡಳಿತದ ಕುರಿತು ಪಿಒಜೆಕೆಯಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಸಿದ ಜಂಟಿ ಅವಾಮಿ ಕ್ರಿಯಾ ಸಮಿತಿಯನ್ನು (ಜೆಎಎಸಿ) ಉಗ್ರ ಸಂಘಟನೆ ಎಂದು ಪಾಕ್ ಘೊಷಿಸಿದೆ. ಜೆಎಎಸಿ ನಾಯಕರ ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಇದು ಎಂತಹ ವಿಪರ್ಯಾಸ. ಮೂಲಭೂತ ಹಕ್ಕುಗಳಿಗಾಗಿ ಧ್ವನಿ ಎತ್ತುವವರನ್ನು ಹತ್ಯೆ ಮಾಡಲಾಗುತ್ತಿದೆ. ಇಲ್ಲಿ ದೊಡ್ಡ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ" ಎಂದಿದ್ದಾರೆ.