ಬೆಂಗಳೂರು,ಜೂ. 12 (DaijiworldNews/AK): ಧರ್ಮಸ್ಥಳ ಪ್ರಕರಣದ ತನಿಖೆಗೆ ರಚಿಸಲಾಗಿರುವ ಎಸ್ಐಟಿಯ ವರದಿಯನ್ನು ಸರ್ಕಾರ ತಕ್ಷಣ ಬಹಿರಂಗ ಮಾಡಬೇಕು ಎಂದು ಶಾಸಕ ವಿ.ಸುನಿಲ್ ಕುಮಾರ್ ಅವರು ಆಗ್ರಹಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ಐಟಿ ರಚನೆ ಆಗಿ ಇಷ್ಟು ತಿಂಗಳು ಕಳೆದರೂ ವರದಿಯನ್ನು ಬಹಿರಂಗ ಮಾಡಿಲ್ಲ. ಈ ಪ್ರಕರಣದ ಹಿಂದೆ ಯಾರ ಕೈವಾಡ ಇದೆ ಎಂದು ಸರ್ಕಾರ ತಿಳಿಸಲಿ ಎಂದು ಒತ್ತಾಯಿಸಿದರು.
ಹಿಂದೂ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ವಿನಾಕಾರಣ ಅವಹೇಳ ಮಾಡಲಾಗುತ್ತಿದೆ. ದೊಡ್ಡ ಷಡ್ಯಂತ್ರ ರೂಪಿಸಿದ್ದ ಗ್ಯಾಂಗಿನ ಆರೋಪಿ ಕೋರ್ಟ್ಗೆ ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ. ಪ್ರಕರಣದ ಬಗ್ಗೆ ವಿಧಾನಸಭೆ ಹಾಗೂ ಪಕ್ಷದ ವತಿಯಿಂದ ಬೇರೆ ಬೇರೆ ಸಂದರ್ಭದಲ್ಲಿ ಉಲ್ಲೇಖ ಮಾಡಿದ್ದೆವು. ಇದರ ಹಿಂದೆ ಕೇರಳದ ನಂಟಿದೆ, ಬೇರೆ ಬೇರೆ ರಾಜ್ಯದ ನಂಟಿದೆ ಎಂದು ಹೇಳಿದ್ದೆವು ಎಂದು ಹೇಳಿದರು.
ಆರೋಪಿ ಎಸ್ಐಟಿ ಮುಂದೆ ಹೇಳಲಾಗದ್ದನ್ನು ನ್ಯಾಯಾಲಯದ ಮುಂದೆ ಹೇಳಿದ್ದಾನೆಂದರೆ ಎಸ್ಐಟಿ ಯಾವ ರೀತಿಯ ತನಿಖೆ ಮಾಡಿತ್ತು. ಇದರ ಹಿಂದಿರುವ ಹುನ್ನಾರ ಏನು? ಎಲ್ಲವೂ ಸಾರ್ವಜನಿಕ ಚರ್ಚೆಗೆ ಬರಬೇಕಾಗಿದೆ ಎಂದರು.