ಲಕ್ನೋ, ಜೂ. 12 (DaijiworldNews/TA): ದೆಹಲಿಗೆ ತೆರಳಲು ಸಜ್ಜಾಗಿದ್ದ ಇಂಡಿಗೋ ಏರ್ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಮಾನ ಟೇಕ್ಆಫ್ಗೆ ಕೆಲವೇ ಕ್ಷಣಗಳು ಬಾಕಿ ಇರುವಾಗ ಬಂದ ಅನಾಮಧೇಯ ಸಂದೇಶದ ಹಿನ್ನೆಲೆಯಲ್ಲಿ ಹಾರಾಟವನ್ನು ತುರ್ತಾಗಿ ಸ್ಥಗಿತಗೊಳಿಸಲಾಯಿತು.

ಮಾಹಿತಿಯ ಪ್ರಕಾರ, ಇಂಡಿಗೋ ವಿಮಾನವು ರನ್ವೇ ಕಡೆಗೆ ಚಲಿಸಲು ಸಜ್ಜಾಗಿದ್ದ ವೇಳೆ ಏರ್ಲೈನ್ಸ್ ಕಂಟ್ರೋಲ್ ರೂಮ್ಗೆ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಸಂದೇಶ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೈಲಟ್ ಹಾಗೂ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳು ತಕ್ಷಣವೇ ವಿಮಾನ ಹಾರಾಟವನ್ನು ರದ್ದುಪಡಿಸಿ ಭದ್ರತಾ ಕ್ರಮಗಳನ್ನು ಕೈಗೊಂಡರು.
ಬಾಂಬ್ ಬೆದರಿಕೆ ಮಾಹಿತಿ ಸಿಕ್ಕ ತಕ್ಷಣ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ಬಳಿಕ ವಿಮಾನವನ್ನು ರನ್ವೇಯಿಂದ ದೂರವಿರುವ ಸುರಕ್ಷಿತ ‘ಐಸೊಲೇಶನ್ ಬೇ’ಗೆ ಕೊಂಡೊಯ್ಯಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ತುರ್ತು ನಿರ್ಗಮನ ದ್ವಾರಗಳ ಮೂಲಕ ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDS) ಸ್ಥಳಕ್ಕೆ ಧಾವಿಸಿ ತೀವ್ರ ತಪಾಸಣೆ ನಡೆಸಿತು. ತರಬೇತಿ ಪಡೆದ ಶ್ವಾನದಳದ ಸಹಾಯದಿಂದ ವಿಮಾನದ ಒಳಭಾಗ, ಇಂಜಿನ್ ಮತ್ತು ಪ್ರಯಾಣಿಕರ ಲಗೇಜ್ಗಳನ್ನು ಪರಿಶೀಲಿಸಲಾಯಿತು.
ಆದರೆ, ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಆದರೂ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಸಂಪೂರ್ಣ ಮರುಪರಿಶೀಲನೆಗೆ ಒಳಪಡಿಸಲಾಗಿದ್ದು, ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣದಲ್ಲೇ ಕಾಯಬೇಕಾಯಿತು.
ಇತ್ತೀಚಿನ ದಿನಗಳಲ್ಲಿ ಭಾರತೀಯ ವಿಮಾನಗಳಿಗೆ ಸಂಬಂಧಿಸಿದ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆಯನ್ನೂ ಗಂಭೀರವಾಗಿ ಪರಿಗಣಿಸಲಾಗಿದೆ. ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿ ಯಾರು, ಸಂದೇಶ ಎಲ್ಲಿಂದ ಬಂದಿದೆ ಎಂಬುದನ್ನು ಪತ್ತೆಹಚ್ಚಲು ಲಕ್ನೋ ಸೈಬರ್ ಕ್ರೈಮ್ ವಿಭಾಗ ಹಾಗೂ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.