ನವದೆಹಲಿ,ಜೂ. 06 (DaijiworldNews/AK): ನೀಟ್ ಪರೀಕ್ಷೆ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ಆರಂಭಿಸಿದೆ.

ಪ್ರತಿಭಟನೆಯ ಮುಂದಾಳತ್ವ ವಹಿಸಲು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಹಾಗೂ ಪಾರ್ಟಿಯ ಮುಖ್ಯಸ್ಥ ಅಭಿಜಿತ್ ದೀಪ್ಕೆ ದೆಹಲಿಗೆ ಆಗಮಿಸಿದರು.
ಭಾರತಕ್ಕೆ ಹೊರಡುವ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಅವರು, ನಾನು ಭಾರತಕ್ಕೆ ಮರಳುತ್ತಿದ್ದೇನೆ. ನನ್ನ ಭವಿಷ್ಯವನ್ನು ದೇಶದ ಸಂವಿಧಾನದ ಕೈಗೆ ಒಪ್ಪಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಕೂಡ ಭಾಗವಹಿಸಿದ್ದಾರೆ. ಅವರು ಪ್ರತಿಭಟನೆಗೆ ಆಗಮಿಸುತ್ತಿದ್ದಂತೆ ಪ್ರತಿಭಟನೆ ತೀವ್ರ ಕಾವು ಪಡೆದುಕೊಂಡಿದೆ.
ತಮ್ಮನ್ನು ಬಂಧಿಸುವ ಸಾಧ್ಯತೆಗಳ ಬಗ್ಗೆ ಮಾತನಾಡಿರುವ ದೀಪ್ಕೆ, ತಾವು ಶಾಶ್ವತವಾಗಿ ಭಾರತಕ್ಕೆ ಮರಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಅಧಿಕಾರಿಗಳು ತಮ್ಮನ್ನು ಬಂಧಿಸಲು ಬಯಸಿದರೆ ಅದಕ್ಕೆ ಸಿದ್ಧರಾಗಿರುವುದಾಗಿ ಅವರು ಹೇಳಿದ್ದರು. ಭಾರತದ ಸಂವಿಧಾನ ತಮಗೆ ನೀಡಿರುವ ಮೂಲಭೂತ ಹಕ್ಕನ್ನು ಚಲಾಯಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಧ್ವನಿಯನ್ನು ಎತ್ತಿಹಿಡಿಯಲು ದೇಶಕ್ಕೆ ಮರಳುತ್ತಿದ್ದೇನೆ. ಈ ಚಳವಳಿಯನ್ನು ಶಾಂತಿ ಮತ್ತು ಪ್ರೀತಿಯಿಂದ ಮುನ್ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು.