ಬೆಂಗಳೂರು, ಜೂ. 06 (DaijiworldNews/TA): ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಇದೀಗ ಅವರನ್ನು ಮನವೊಲಿಸಲು ಪಕ್ಷದ ಹೈಕಮಾಂಡ್ ಮಹತ್ವದ ರಾಜಿ ಸೂತ್ರ ಮುಂದಿಟ್ಟಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಮೂಲಗಳ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ಪರವಾಗಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿರುವ ಅವರು, ಸಹಕಾರ ಮತ್ತು ಮುಜರಾಯಿ ಇಲಾಖೆಗಳ ಸಚಿವ ಸ್ಥಾನವನ್ನು ಒಟ್ಟಿಗೆ ವಹಿಸಿಕೊಳ್ಳುವಂತೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ರಾಮಲಿಂಗಾರೆಡ್ಡಿ ಅವರ ಹಿರಿತನ, ಪಕ್ಷನಿಷ್ಠೆ ಮತ್ತು ಅನುಭವವನ್ನು ಉಲ್ಲೇಖಿಸಿದ ಸುರ್ಜೇವಾಲಾ, ಪಕ್ಷಕ್ಕೆ ಅವರ ಸೇವೆಯ ಅಗತ್ಯವಿದೆ ಎಂದು ಮನವರಿಕೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. "ನಿಮ್ಮನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪಕ್ಷ ಮತ್ತು ಸರ್ಕಾರಕ್ಕೆ ನಿಮ್ಮ ಅನುಭವ ಅಗತ್ಯ. ಎರಡು ಪ್ರಮುಖ ಖಾತೆಗಳನ್ನು ವಹಿಸಿಕೊಂಡು ಸರ್ಕಾರಕ್ಕೆ ಸಹಕಾರ ನೀಡಿ" ಎಂದು ಮನವೊಲಿಕೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.
ಆದರೆ ಸುರ್ಜೇವಾಲಾ ನೀಡಿದ ಈ ಪ್ರಸ್ತಾಪವನ್ನು ರಾಮಲಿಂಗಾರೆಡ್ಡಿ ಒಪ್ಪಿಕೊಂಡಿಲ್ಲ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಎರಡು ಖಾತೆಗಳ ಹೊಣೆಗಾರಿಕೆಯನ್ನು ಒಟ್ಟಿಗೆ ವಹಿಸಿಕೊಳ್ಳುವ ವಿಚಾರವಾಗಲಿ ಅಥವಾ ತಮ್ಮ ರಾಜಕೀಯ ನಿಲುವು ಮತ್ತು ಸ್ವಾಭಿಮಾನದ ಕಾರಣವಾಗಲಿ, ಅವರು ಈ ಆಫರ್ಗೆ ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದೆ. ಇದರಿಂದ ಕಾಂಗ್ರೆಸ್ ಒಳರಾಜಕೀಯದಲ್ಲಿ ಹೊಸ ಗೊಂದಲ ಸೃಷ್ಟಿಯಾಗಿದ್ದು, ಹೈಕಮಾಂಡ್ಗೆ ಮತ್ತೊಂದು ಸವಾಲು ಎದುರಾಗಿದೆ.
ರಾಮಲಿಂಗಾರೆಡ್ಡಿ ಅವರ ಅಸಮಾಧಾನ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ನೇರವಾಗಿ ಮಧ್ಯಪ್ರವೇಶಿಸಿದ್ದಾರೆ ಎನ್ನಲಾಗಿದೆ. ಸುರ್ಜೇವಾಲಾ ಮತ್ತು ಡಿಕೆ ಶಿವಕುಮಾರ್ ನಡುವೆ ಈ ವಿಷಯದ ಕುರಿತು ನಿರಂತರ ಸಮಾಲೋಚನೆ ನಡೆಯುತ್ತಿದ್ದು, ರಾಮಲಿಂಗಾರೆಡ್ಡಿ ಅವರನ್ನು ಮತ್ತೆ ಪಕ್ಷ ಮತ್ತು ಸರ್ಕಾರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಉಳಿಸಿಕೊಳ್ಳಲು ಪ್ರಯತ್ನಗಳು ಮುಂದುವರಿದಿವೆ.
ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ನ ಹಿರಿಯ ಮತ್ತು ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಕಾರಣ, ಅವರ ಅಸಮಾಧಾನ ಬಹಿರಂಗವಾಗಿರುವುದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ಸರ್ಕಾರ ರಚನೆಯ ಆರಂಭದಲ್ಲೇ ಇಂತಹ ಬೆಳವಣಿಗೆಗಳು ನಡೆದಿರುವುದು ಕಾಂಗ್ರೆಸ್ ನಾಯಕತ್ವಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಿರಿಯ ನಾಯಕರ ಅಸಮಾಧಾನ ನಿವಾರಣೆ ಮಾಡಿ ಪಕ್ಷದ ಏಕತೆ ಮತ್ತು ಸರ್ಕಾರದ ಸ್ಥಿರತೆ ಕಾಪಾಡುವುದು ಇದೀಗ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುಂದಿರುವ ದೊಡ್ಡ ಸವಾಲಾಗಿದೆ.
ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆ ನಿರ್ಧಾರವನ್ನು ಮರುಪರಿಶೀಲಿಸುತ್ತಾರೆಯೇ? ಸುರ್ಜೇವಾಲಾ ಮತ್ತು ಡಿಕೆಶಿ ನಡೆಸುತ್ತಿರುವ ಮನವೊಲಿಕೆ ಯಶಸ್ವಿಯಾಗುತ್ತದೆಯೇ? ಅಥವಾ ಈ ಬೆಳವಣಿಗೆ ಕಾಂಗ್ರೆಸ್ ಒಳರಾಜಕೀಯದಲ್ಲಿ ಮತ್ತಷ್ಟು ಬಿರುಗಾಳಿ ಎಬ್ಬಿಸುತ್ತದೆಯೇ ಎಂಬುದರ ಮೇಲೆ ರಾಜ್ಯ ರಾಜಕೀಯದ ಗಮನ ನೆಟ್ಟಿದೆ.