ಬೆಂಗಳೂರು, ಜೂ. 06 (DaijiworldNews/TA): ರಾಜ್ಯದ ಭದ್ರತೆಗೆ ಸಂಬಂಧಿಸಿದಂತೆ ಆತಂಕಕಾರಿ ಬೆಳವಣಿಗೆಯೊಂದು ಬೆಳಕಿಗೆ ಬಂದಿದ್ದು, ಪಾಕಿಸ್ತಾನ ಮೂಲದ ಶಂಕಿತ ಉಗ್ರನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಇಬ್ಬರು ಯುವಕರನ್ನು ತುಮಕೂರು ನಗರ ಪೊಲೀಸರು ಬಂಧಿಸಿದ್ದಾರೆ. ದೇಶವಿರೋಧಿ ಚಟುವಟಿಕೆಗಳು ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದ ಸಂಚು ರೂಪಿಸಿರುವ ಶಂಕೆ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಬಂಧಿತರನ್ನು ತುಮಕೂರಿನ ಅಲ್ಲಾಬಕ್ಷ್ (24) ಹಾಗೂ ದಾವಣಗೆರೆಯ ಬಿಡಿ ಲೇಔಟ್ ನಿವಾಸಿ ಜಮೀರ್ ಖಾನ್ (22) ಎಂದು ಗುರುತಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆಯಿಂದ ದೊರೆತ ಮಹತ್ವದ ಮಾಹಿತಿಯ ಆಧಾರದ ಮೇಲೆ ತುಮಕೂರು ಹಾಗೂ ದಾವಣಗೆರೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಸುಮಾರು ಒಂದು ತಿಂಗಳ ಹಿಂದೆ ಪಾಕಿಸ್ತಾನ ಮೂಲದ ‘ರಾಣಾ’ ಎಂಬಾತ ಇನ್ಸ್ಟಾಗ್ರಾಮ್ ಮೂಲಕ ಯುವಕರನ್ನು ಸಂಪರ್ಕಿಸಿದ್ದ ಎನ್ನಲಾಗಿದೆ. ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕ ಬೆಳೆಸಿ, ದೇಶವಿರೋಧಿ ಹಾಗೂ ಪ್ರಚೋದನಾತ್ಮಕ ವಿಚಾರಗಳನ್ನು ಹಂಚಿಕೊಳ್ಳಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಇದರ ಜೊತೆಗೆ ವಾಟ್ಸ್ಆ್ಯಪ್ನಲ್ಲಿ ಪ್ರತ್ಯೇಕ ಗುಂಪು ರಚಿಸಿ, ಉತ್ತರ ಭಾರತದ ಹಲವು ಯುವಕರನ್ನು ಅದರಲ್ಲಿ ಸೇರಿಸಿಕೊಳ್ಳಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಆರಂಭದಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಧರ್ಮಗುರುಗಳ ಪ್ರವಚನಗಳನ್ನು ಹಂಚಿಕೊಳ್ಳುತ್ತಿದ್ದ ರಾಣಾ, ನಂತರ ಸಮುದಾಯದ ಹೆಸರಿನಲ್ಲಿ ಭಾವನಾತ್ಮಕವಾಗಿ ಪ್ರಚೋದಿಸುವ ಪ್ರಯತ್ನ ನಡೆಸಿದ್ದಾನೆ ಎನ್ನಲಾಗಿದೆ.
“ನಮ್ಮ ಸಮುದಾಯದ ಮೇಲೆ ಯಾವುದೇ ಅನ್ಯಾಯವಾದರೆ ಎಲ್ಲರೂ ಒಗ್ಗಟ್ಟಾಗಿ ಪ್ರತಿಕ್ರಿಯಿಸಬೇಕು” ಎಂಬ ರೀತಿಯ ಸಂದೇಶಗಳ ಮೂಲಕ ಯುವಕರನ್ನು ಪ್ರಭಾವಿತಗೊಳಿಸುವ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದ ಮೌಲ್ವಿಯೊಬ್ಬರ ಹತ್ಯೆ ಪ್ರಕರಣದ ಬಳಿಕ, ಅದರ ಪ್ರತೀಕಾರದ ಕುರಿತು ವಾಟ್ಸ್ಆ್ಯಪ್ ಗುಂಪಿನಲ್ಲಿ ಚರ್ಚೆಗಳು ನಡೆದಿದ್ದವು ಎಂದು ತನಿಖಾ ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇರುವುದರಿಂದ ಕೇಂದ್ರ ಗುಪ್ತಚರ ಇಲಾಖೆ ರಾಜ್ಯ ಪೊಲೀಸರನ್ನು ಎಚ್ಚರಿಸಿತ್ತು. ಮೂಲಗಳ ಪ್ರಕಾರ, ಬಂಧಿತರು ಐಸಿಸ್ ಉಗ್ರ ಸಂಘಟನೆಗೆ ಹಣಕಾಸು ನೆರವು ಒದಗಿಸುತ್ತಿದ್ದ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಸ್ಫೋಟಕ ಕೃತ್ಯಗಳನ್ನು ನಡೆಸುವ ಉದ್ದೇಶದ ಕುರಿತು ಚರ್ಚೆಗಳು ನಡೆದಿರುವ ಶಂಕೆಯೂ ವ್ಯಕ್ತವಾಗಿದೆ.
ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಅಂತಿಮ ಸತ್ಯಾಂಶಗಳು ಅಧಿಕೃತ ತನಿಖೆಯ ಬಳಿಕವೇ ಸ್ಪಷ್ಟವಾಗಲಿವೆ. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ರೈಲ್ವೆ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಚಲನವಲನಗಳನ್ನು ಪತ್ತೆಹಚ್ಚಲಾಯಿತು. ಬೇರೆಡೆಗೆ ತೆರಳಲು ಯತ್ನಿಸುತ್ತಿದ್ದ ವೇಳೆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೊದಲಿಗೆ ತುಮಕೂರಿನಲ್ಲಿ ಅಲ್ಲಾಬಕ್ಷ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಜಮೀರ್ ಖಾನ್ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಇಬ್ಬರನ್ನೂ ಬಂಧಿಸಿರುವ ತುಮಕೂರು ನಗರ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ರಾಜ್ಯದಲ್ಲಿ ಯಾವುದೇ ಸ್ಲೀಪರ್ ಸೆಲ್ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬುದರ ಕುರಿತು ತನಿಖೆಯನ್ನು ವಿಸ್ತರಿಸಿದ್ದಾರೆ. ಪ್ರಕರಣದ ಹಿಂದೆ ಇನ್ನಷ್ಟು ವ್ಯಕ್ತಿಗಳ ಸಂಪರ್ಕವಿದೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.