ಗಾಂಧಿನಗರ, ಜೂ. 05 (DaijiworldNews/AA): ದೃಢಸಂಕಲ್ಪ, ಕಠಿಣ ಪರಿಶ್ರಮ ಮತ್ತು ಗುರಿಯೆಡೆಗಿನ ಅಚಲ ಬದ್ಧತೆಯಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಗುಜರಾತ್ನ ಭಾರತ-ಪಾಕಿಸ್ತಾನ ಗಡಿ ಭಾಗದ ದೂರದ ಹಳ್ಳಿಯ ಚೌಧರಿ ವಿಪುಲ್ಭಾಯ್ ಕರ್ಮನ್ಭಾಯ್ ಅವರೇ ಸಾಕ್ಷಿ.

ವಿಪುಲ್ಭಾಯ್ ಬನಸ್ಕಾಂತ ಜಿಲ್ಲೆಯ ಸಂತಾಲ್ಪುರ ತಾಲೂಕಿನ ಹಮೀರ್ಪುರ ಎಂಬ ಗಡಿ ಗ್ರಾಮದವರು. ಮಧ್ಯಮ ವರ್ಗದ ರೈತಾಪಿ ಕುಟುಂಬದಲ್ಲಿ ಜನಿಸಿದ ಇವರು ಬೆಳೆದ ಪರಿಸರದಲ್ಲಿ ಶೈಕ್ಷಣಿಕ ಅವಕಾಶಗಳು ತೀರಾ ಸೀಮಿತವಾಗಿದ್ದವು. ಹಳ್ಳಿಯಲ್ಲಿ ಕೇವಲ ಪ್ರಾಥಮಿಕ ಶಿಕ್ಷಣದ ಸೌಲಭ್ಯ ಮಾತ್ರ ಇದ್ದಿದ್ದರಿಂದ, ಉನ್ನತ ಶಿಕ್ಷಣಕ್ಕಾಗಿ ಅವರು ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ತೆರಳಬೇಕಾಯಿತು.
ವಿಪುಲ್ಭಾಯ್ ಅವರು ಪದವಿ ಶಿಕ್ಷಣ ಮುಗಿದ ತಕ್ಷಣ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಆರಂಭವಿಸಿದರು. ನಿರಂತರ ಪರಿಶ್ರಮದ ಫಲವಾಗಿ, 2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅವರು 348ನೇ ರ್ಯಾಂಕ್ ಗಳಿಸಿ ಐಪಿಎಸ್ ಆಯ್ಕೆಯಾಗಿದ್ದರು. ಆದರೆ ವಿಪುಲ್ಭಾಯ್ ಅವರ ಅಂತಿಮ ಗುರಿ ಮಾತ್ರ ಐಎಎಸ್ ಅಧಿಕಾರಿ ಆಗುವುದೇ ಆಗಿತ್ತು.
ಐಪಿಎಸ್ನಂತಹ ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡೇ, ಕರ್ತವ್ಯದ ನಡುವೆಯೇ ವಿಪುಲ್ಭಾಯ್ ಅವರು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಮುಂದುವರಿಸಿದರು. ಅಂತಿಮವಾಗಿ 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ 115ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾದರು.