ಬೆಂಗಳೂರು, ಮೇ. 21 (DaijiworldNews/AK): ದೆಹಲಿಯಲ್ಲಿರುವ ಕಾಂಗ್ರೆಸ್ ಮುಖಂಡರಾದ ಖರ್ಗೆಯವರು ಮಂಗನ ಮಾದರಿಯಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಎಂಬ ಇಲ್ಲಿನ ಎರಡು ಬೆಕ್ಕುಗಳ ಜಗಳ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗ್ರವಾಲ್ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರು ಜಗಳ ಮಾಡಿಕೊಂಡು ತಾವು ಮುಖ್ಯಮಂತ್ರಿ ಆಗಲು ಅವಕಾಶ ಸಿಗಲಿ ಎಂದು ಖರ್ಗೆಯವರು ಕಾಯುತ್ತಿದ್ದಾರೆ ಎಂದು ವಿಶ್ಲೇಷಿಸಿದರು. ಇಲ್ಲಿ ಮುಖ್ಯಮಂತ್ರಿಯ 2 ಮುಖಗಳಿಲ್ಲ. 3 ಜನರಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ಸಿನ ಸ್ಥಿತಿ ಹದಗೆಟ್ಟಿದೆ. ಹಲವಾರು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ನಾಳೆ ವಿಧಾನಸಭೆ ಚುನಾವಣೆ ನಡೆದರೂ ಜನರು ಕಾಂಗ್ರೆಸ್ಸನ್ನು ಸೋಲಿಸಿ ಬಿಜೆಪಿ ಸರಕಾರ ಮಾಡಲು ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹೊರಗಡೆಯಿಂದ ಹೆಚ್ಚು ಸಾಲ ಪಡೆದುದರಿಂದ ರಾಜ್ಯವು ಆರ್ಥಿಕ ಸಂಕಷ್ಟದಲ್ಲಿದೆ. ಆರೇಳು ತಿಂಗಳುಗಳಿಂದ ಇಲ್ಲಿ ಸರಕಾರವೇ ಇಲ್ಲವಾಗಿದೆ. ಇವರು ಪರಸ್ಪರ ಜಗಳ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಪ್ರಶ್ನೆಗೆ ಉತ್ತರ ನೀಡಿದ ಅವರು, ನಮ್ಮ ಪೂರ್ಣಾವಧಿ ರಾಜ್ಯ ಅಧ್ಯಕ್ಷರಿದ್ದು, ಅವರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಧ್ಯಕ್ಷರಾಗಿ ಮುಂದುವರೆಯುವರೇ ಇಲ್ಲವೇ ಎಂಬುದು ಇಲ್ಲಿನ ಸಭೆಯಲ್ಲಿ ನಿರ್ಧಾರ ಆಗುವುದಿಲ್ಲ. ಇಲ್ಲಿ ಅಧ್ಯಕ್ಷರ ಮೌಲ್ಯಮಾಪನ ನಡೆಯುತ್ತದೆ ಎಂಬ ಭ್ರಮೆ ಇದ್ದರೆ ಅದು ಸರಿಯಲ್ಲ ಎಂದು ನುಡಿದರು.
ನಮ್ಮಲ್ಲಿ ಮೌಲ್ಯಮಾಪನ ನಿರಂತರವಾಗಿ ನಡೆಯುತ್ತಿರುತ್ತದೆ. ಯಾವ ಬಿಜೆಪಿ ನಾಯಕ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಇಲ್ಲಿ ಬರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ನಾನು ಅಧ್ಯಕ್ಷರ ಕಾರ್ಯಕರ್ತನಲ್ಲ; ನಾನು ಬಿಜೆಪಿ ಕಾರ್ಯಕರ್ತ. ನಾನೇ ಎಲ್ಲವನ್ನೂ ಹೇಳಬಲ್ಲೆ ಎಂದು ತಿಳಿಸಿದರು.
ಯಾವಾಗ ಅಂತಿಮವಾಗಿ ಒಬ್ಬ ಅಧ್ಯಕ್ಷರನ್ನು ಪ್ರಕಟಿಸಲಾಗುವುದೋ ಆಗ ಹಳೆಯ ತಂಡದ ಬದಲಾಗಿ ಸಹಜವಾಗಿ ಹೊಸ ತಂಡ ರಚಿಸಲಾಗುತ್ತದೆ. ಹೊಸ ಅಧ್ಯಕ್ಷರು ಬಂದರೆ ಕೋರ್ ಕಮಿಟಿ ಬದಲಾಗುವುದಿಲ್ಲ. ಅದನ್ನು ರಾಷ್ಟ್ರ ಘಟಕವು ನಿರ್ಧರಿಸುತ್ತದೆ. ಒಂದಿಬ್ಬರು ಹಳೆಯವರನ್ನು ಬದಲಿಸಿ ಹೊಸಬರು ಬರಬಹುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
3ನೇ ತಾರೀಕಿಗೆ ಫಾರ್ಮ್ ಭರ್ತಿ ಮಾಡಬೇಕು. 5ರಂದು ಸಂದರ್ಶನ ನಡೆಸಬೇಕು. 7ರಂದು ಹೆಸರು ಘೋಷಿಸಬೇಕೆನ್ನಲು ಹಾಗೂ ಇಂತಿಷ್ಟು ವೇತನ ನೀಡಬೇಕೆನ್ನಲು ಅಧ್ಯಕ್ಷತೆ ಎಂಬುದು ಒಂದು ಉದ್ಯೋಗವಲ್ಲ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಈಗ ಶಕ್ತಿಶಾಲಿ ಅಧ್ಯಕ್ಷರಿದ್ದಾರೆ. ಇದೇ ಅಧ್ಯಕ್ಷರ ನೇತೃತ್ವದಲ್ಲೇ ನಾವು ಲೋಕಸಭಾ ಚುನಾವಣೆ ಎದುರಿಸಿದ್ದೇವೆ ಎಂದರು.
ಯಾರು ಅಧ್ಯಕ್ಷರಿರುತ್ತಾರೋ ಅವರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ನಮ್ಮ ಪಕ್ಷದ ರಾಷ್ಟ್ರೀಯ ಸಹ-ಸಂಘಟನಾ ಕಾರ್ಯದರ್ಶಿಯವರು ಇಲ್ಲಿಗೆ ಬಂದಿದ್ದಾರೆ. 2027ರಲ್ಲಿ ವಿಧಾನಸಭಾ ಚುನಾವಣೆ ಇದೆ. ರಾಜ್ಯದಲ್ಲಿ ವಿಫಲ, ಭ್ರಷ್ಟಾಚಾರಿಗಳ ಸರಕಾರ ಇದೆ. ತುಷ್ಟೀಕರಣ ಆಧರಿತ ಸರಕಾರ ಇದಾಗಿದೆ. ಅದು ಕರ್ನಾಟಕದ ಜನರಿಗೆ ಮೋಸ ಮಾಡಿದೆ. ಗ್ಯಾರಂಟಿಗಳನ್ನೂ ಸರಿಯಾಗಿ ನೀಡಿಲ್ಲ ಎಂದು ಟೀಕಿಸಿದರು.