ಬೆಂಗಳೂರು, ಮೇ. 21 (DaijiworldNews/AK):ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದನ್ನು ರಾಹುಲ್ ಗಾಂಧಿ ಅವರಿಗೆ ಸಹಿಸಲು ಆಗುತ್ತಿಲ್ಲ. ಅವರು ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಜೀ ಅವರ ಕುರಿತು ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆ ಖಂಡಿಸಿದ ವಿಜಯೇಂದ್ರ ಅವರು, ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು ಈ ರೀತಿ ಬಾಲಿಷವಾಗಿ ಹೇಳಿಕೆ ನೀಡಬಾರದು ಎಂದರು.
ಎಲುಬಿಲ್ಲದ ನಾಲಿಗೆ ಏನೂ ಬೇಕಾದರೂ ನುಡಿಯಬಾರದು. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಬಗ್ಗೆ ಅವಮಾನಕರವಾಗಿ ಮಾತನಾಡಬಾರದು. ಹಿಂದುಳಿದ ಸಮಾಜಕ್ಕೆ ಸೇರಿದ ಮೋದಿ ಅವರು ಪ್ರಧಾನಿಯಾಗಿ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ದೇಶವನ್ನು ನಾಲ್ಕನೇ ಆರ್ಥಿಕ ಶಕ್ತಿಯಾಗಿ ಮಾಡಿದ್ದಾರೆ. ದೇಶದ ಅಭಿವೃದ್ಧಿ ಸಹಿಸದೆ ರಾಹುಲ್ ಗಾಂಧಿ ಅವರು ಈ ರೀತಿ ಮಾತನಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಕಿತ್ತು ಹಾಕುವ ಧೈರ್ಯ ಕಾಂಗ್ರೆಸ್ಗೆ ಇರಲಿಲ್ಲ. ಅದನ್ನು ಕಿತ್ತು ಹಾಕಿದ್ದು ಅಮಿತ್ ಶಾ ಅವರು. ಇದಕ್ಕೆ ರಾಹುಲ್ ಗಾಂಧಿ ಅವರು ಅಮಿತ್ ಶಾ ಅವರನ್ನು ದೇಶದ್ರೋಹಿ ಎಂದು ಕರೆಯುತ್ತಾರೆಯೇ? ದೇಶದಲ್ಲಿ ನಕ್ಸಲರನ್ನು ಬುಡಸಮೇತ ನಾಶ ಮಾಡುವಲ್ಲಿ ಅಮಿತ್ ಶಾ ಅವರು ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಭ್ರಷ್ಟಾಚಾರರಹಿತ ಆಡಳಿತ ನೀಡಿದ್ದಾರೆ. ಅದನ್ನು ರಾಹುಲ್ ಗಾಂಧಿಗೆ ಸಹಿಸಲು ಆಗುತ್ತಿಲ್ಲ ಎಂದರು.
ರಾಜ್ಯದಲ್ಲೂ ನಾಲಾಯಕ್ ಕಾಂಗ್ರೆಸ್ ನಾಯಕರು
ರಾಜ್ಯದಲ್ಲೂ ನಾಲಾಯಕ್ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದಾರೆ. ರಾಜ್ಯದ ಸಚಿವರೇ ವಿದೇಶಾಂಗ ಸಚಿವರಂತೆ, ರಕ್ಷಣಾ ಪರಿಣತರ ರೀತಿ ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ. ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಪೌತಿ ಖಾತೆ ಮಾಡಿದ್ದೇ ಸಾಧನೆ ಎಂಬಂತೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.