ಚೆನ್ನೈ, ಮೇ. 21 (DaijiworldNews/AK): ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇಂದು (ಗುರುವಾರ) ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲರು ಒಟ್ಟು 23 ಶಾಸಕರಿಗೆ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಕಾಂಗ್ರೆಸ್ನ 59 ವರ್ಷಗಳ ವನವಾಸ ಅಂತ್ಯ ಈ ಸಂಪುಟ ವಿಸ್ತರಣೆಯ ಅತ್ಯಂತ ಪ್ರಮುಖ ಹೈಲೈಟ್ ಎಂದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ 59 ವರ್ಷಗಳ ಸುದೀರ್ಘ ರಾಜಕೀಯ ಬರಗಾಲ ಕೊನೆಗೊಂಡಿದೆ. ಬರೋಬ್ಬರಿ 59 ವರ್ಷಗಳ ನಂತರ ಕಾಂಗ್ರೆಸ್ ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗಿದೆ. ಕಾಂಗ್ರೆಸ್ನ ಒಟ್ಟು 5 ಶಾಸಕರಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರೊಂದಿಗೆ ಮೈತ್ರಿಪಕ್ಷವಾದ ವಿಸಿಕೆಯ ಇಬ್ಬರು ಶಾಸಕರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಲಾಗಿದೆ.
ಮತ್ತೊಂದು ಮಿತ್ರಪಕ್ಷವಾದ ಐಯುಎಂಎಲ್ ಕೂಡ ಸರ್ಕಾರ ಸೇರಲು ನಿರ್ಧರಿಸಿದೆಯಾದರೂ ಇಂದಿನ ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿದಿದೆ. ತನ್ನ ಇಬ್ಬರು ಶಾಸಕರಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಗೊಂದಲ ಇನ್ನೂ ಬಗೆಹರಿಯದ ಕಾರಣ, ಅಂತಿಮ ನಿರ್ಧಾರವಾದ ಬಳಿಕ ಅದರ ಶಾಸಕರು ಸಚಿವರಾಗಲಿದ್ದಾರೆ.
ವಿಜಯ್ ಸರ್ಕಾರದ ಬಲವೇನು? ಇತ್ತೀಚಿನ ಚುನಾವಣೆಯಲ್ಲಿ ಸಿಎಂ ವಿಜಯ್ ಅವರ ಟಿವಿಕೆ ಪಕ್ಷವು ಸ್ವಂತ ಬಲದಿಂದ 108 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಬಹುಮತಕ್ಕೆ 118 ಶಾಸಕರ ಅಗತ್ಯವಿತ್ತು. ಹೀಗಾಗಿ ವಿಜಯ್ ಅವರು ಕಾಂಗ್ರೆಸ್, ಎಡಪಂಥೀಯರು ಮತ್ತು ಐಯುಎಂಎಲ್ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸಿದರು. ಅಷ್ಟೇ ಅಲ್ಲದೆ, ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಯ ಸಂದರ್ಭದಲ್ಲಿ ವಿರೋಧ ಪಕ್ಷವಾದ ಎಡಿಎಂಕೆಯ (ADMK) 24 ಬಂಡಾಯ ಶಾಸಕರು ಕೂಡ ವಿಜಯ್ ಅವರ ಕೈಹಿಡಿದರು. ಹೀಗಾಗಿ ಬಹುಮತಕ್ಕಿಂತ 26 ಹೆಚ್ಚು ಅಂದರೆ ಬರೋಬ್ಬರಿ 144 ಶಾಸಕರ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸಿದರು.