ನವದೆಹಲಿ, ಮೇ. 20 (DaijiworldNews/AA): ದೇಶಾದ್ಯಂತ ಇತ್ತೀಚೆಗೆ ವರದಿಯಾದ ರೈಲ್ವೆ ಅಗ್ನಿ ಅವಘಡಗಳ ಸರಣಿಯು ವಿಧ್ವಂಸಕ ಕೃತ್ಯಗಳಂತೆ ಕಂಡುಬಂದಿದೆ. ಘಟನೆಗಳ ಹಿಂದೆ ಸಮಾಜ ವಿರೋಧಿ ಶಕ್ತಿಗಳ ಸಂಭಾವ್ಯ ಒಳಗೊಳ್ಳುವಿಕೆಯ ಸಾಧ್ಯತೆ ಇದೆ ಎಂದು ಭಾರತೀಯ ರೈಲ್ವೇ ತಿಳಿಸಿದೆ.

ಪ್ರಾಥಮಿಕ ತನಿಖೆ ವೇಳೆ ಕೆಲವು ಸಾಮಾಜಿಕ ವಿರೋಧಿ ಅಂಶಗಳು ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟುಮಾಡಿ, ಭಯ ಮತ್ತು ಅಸ್ತವ್ಯಸ್ಥತೆ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಮತ್ತು ಸಂಬಂಧಪಟ್ಟ ಏಜೆನ್ಸಿಗಳು ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿವೆ. ಯಾವುದೇ ಸಂದೇಹಾಸ್ಪದ ವ್ಯಕ್ತಿ ಅಥವಾ ಚಟುವಟಿಕೆ ಕಂಡರೆ ತಕ್ಷಣ ರೈಲ್ವೇ ಹೆಲ್ಪ್ಲೈನ್ 139ಗೆ ಮಾಹಿತಿ ನೀಡುವಂತೆ ರೈಲ್ವೇ ಅಧಿಕಾರಿಗಳು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಾಥಮಿಕ ತನಿಖೆಗಳ ಪ್ರಕಾರ, ಕಳೆದ ಎರಡು ದಿನಗಳಲ್ಲಿ ಅಮರಪುರ, ಕೋಟಾ, ಸಾಸಾರಾಮ್ ಮತ್ತು ಹೌರಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ರೈಲು ಕೋಚ್ಗಳಲ್ಲಿ ಬೆಂಕಿ ಹೊತ್ತಿಕೊಂಡಿರುವ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳ ತನಿಖೆ ವೇಳೆ ಕೆಲವೆಡೆ ಪೆಟ್ರೋಲ್ ನೆನೆಸಿಟ್ಟ ಬಟ್ಟೆಗಳು ಪತ್ತೆಯಾಗಿವೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.
ಹೌರಾ ರೈಲ್ವೇ ಸ್ಟೇಷನ್ನಲ್ಲಿ ಮಿಥಿಲಾ ಎಕ್ಸ್ಪ್ರೆಸ್ ರೈಲು ನಿಲ್ಲುವ ಸಮಯದಲ್ಲಿ ಕೋಚ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತನಿಖೆ ವೇಳೆ ಶೌಚಾಲಯದಲ್ಲಿ ಅರ್ಧ ಸುಟ್ಟ ಪೆಟ್ರೋಲ್ ನೆನೆಸಿದ ಬಟ್ಟೆ ಪತ್ತೆಯಾಗಿದೆ. ರೈಲ್ವೇ ಸಿಬ್ಬಂದಿ ತ್ವರಿತ ಕ್ರಮ ಕೈಗೊಂಡು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಇನ್ನೂ ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಮೇ 17ರಂದು ಮಧ್ಯಪ್ರದೇಶದ ರತ್ಲಾಮ್ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಬಾತ್ರೂಮ್ನಿಂದ ಬೆಂಕಿ ಹೊರಹೊಮ್ಮಿದ್ದು, ಚಲಿಸುತ್ತಿರುವ ರೈಲನ್ನು ಸುಡಲು ಸಂಚು ಎಂದು ಅನುಮಾನಿಸಲಾಗಿದೆ. ಅಮರಪುರದಲ್ಲಿ ರೈಲಿನಲ್ಲಿ ಉರಿಯಬಹುದಾದ ವಸ್ತುಗಳಿಗೆ ಬೆಂಕಿ ಹಚ್ಚಲಾಗಿತ್ತು. ಸಾಸಾರಾಮ್ನಲ್ಲಿ ಖಾಲಿ ಕೋಚ್ಗೆ ಉರಿಯುವ ವಸ್ತು ಎಸೆಯಲಾಗಿತ್ತು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.