ನವದೆಹಲಿ/ ರಾಯ್ಬರೇಲಿ, ಮೇ. 20 (DaijiworldNews/AK):ರೋಮ್ ಪ್ರವಾಸದಲ್ಲಿರುವ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಉಡುಗೊರೆಯಾಗಿ ಮೆಲೋಡಿ ಚಾಕೊಲೇಟ್ ನೀಡಿದ ವಿಚಾರದ ಬಗ್ಗೆಯೂ ಟೀಕಿಸಿದ ಅವರು ಇದು ನಾಯಕತ್ವವಲ್ಲ, ನೌಟಂಕಿ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳು ಸಂಕಷ್ಟದಲ್ಲಿರುವಾಗ ಪ್ರಧಾನಿ ಮೋದಿ ನಗುತ್ತಾ ರೀಲ್ಸ್ ಮಾಡುತ್ತಿದ್ದಾರೆ. ದೇಶದ ಮೇಲೆ ಆರ್ಥಿಕ ಸಂಕಷ್ಟದ ಮಬ್ಬು ಕವಿದಿದೆ. ಆದರೆ ನಮ್ಮ ಪ್ರಧಾನಿ ಇಟಲಿಯಲ್ಲಿ ಸಿಹಿತಿಂಡಿ ಹಂಚುತ್ತಿದ್ದಾರೆ. ಪ್ರಧಾನಿ ನಗುತ್ತಾ ರೀಲ್ಸ್ ಮಾಡುತ್ತಿದ್ದರೆ, ಬಿಜೆಪಿ ನಾಯಕರು ಚಪ್ಪಾಳೆ ತಟ್ಟುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮತ್ತೊಂದೆಡೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದ ಬಹುಜನ ಸ್ವಾಭಿಮಾನ ಸಭೆಯಲ್ಲಿ ಮಾತನಾಡಿದ ರಾಹುಲ್, ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಭೆಯಲ್ಲಿ ಜನರು ಚಪ್ಪಾಳೆ ತಟ್ಟುತ್ತಿದ್ದುದನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ನೀವು ಎಲ್ಲರೂ ಚಪ್ಪಾಳೆ ತಟ್ಟುತ್ತೀರಿ. ಆದರೆ ಆರ್ಎಸ್ಎಸ್ ಸದಸ್ಯರು ನಿಮ್ಮ ಕಣ್ಣೆದುರೇ ಸಂವಿಧಾನವನ್ನು ಹರಿದು ಎಸೆದಾಗ ಮೌನವಾಗಿರುತ್ತೀರಿ. ಈ ಸಂವಿಧಾನದಲ್ಲಿ ನಿಮ್ಮ ಧ್ವನಿ ಮತ್ತು ನಿಮ್ಮ ರಕ್ತವಿದೆ. ಅದನ್ನು ಉಳಿಸುವುದು ನಿಮ್ಮ ಜವಾಬ್ದಾರಿ ಎಂದಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ವಿದೇಶ ಪ್ರವಾಸ ಕುರಿತ ಹೇಳಿಕೆಗಳನ್ನೂ ಟೀಕಿಸಿದ ಅವರು, ಪ್ರಧಾನಿ ಜನರಿಗೆ ವಿದೇಶ ಪ್ರವಾಸ ಮಾಡಬೇಡಿ ಎಂದು ಹೇಳುತ್ತಾರೆ. ಚಿನ್ನ ಖರೀದಿಸಬೇಡಿ ಎನ್ನುತ್ತಾರೆ. ಎಲೆಕ್ಟ್ರಿಕ್ ವಾಹನ ಖರೀದಿಸಿ ಎನ್ನುತ್ತಾರೆ. ಆದರೆ ತಾವೇ ಸಾವಿರಾರು ಕೋಟಿ ರೂ. ಮೌಲ್ಯದ ವಿಮಾನಗಳಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ. ದೇಶದ ಮೇಲೆ ಆರ್ಥಿಕ ಚಂಡಮಾರುತ ಸಮೀಪಿಸುತ್ತಿದೆ. ಕೆಲವೇ ತಿಂಗಳಲ್ಲಿ ದರ ಏರಿಕೆ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಗಳು ಎಲ್ಲಿ ಹೋಗುತ್ತವೆ ಎಂಬುದನ್ನು ನೀವು ನೋಡುತ್ತೀರಿ. ಮುಂದೆ ರೈತರಿಗೆ ರಸಗೊಬ್ಬರವೂ ಸಿಗದ ಪರಿಸ್ಥಿತಿ ಬರಬಹುದು ಎಂದು ರಾಹುಲ್ ಗಾಂಧಿ ಇದೇ ವೇಳೆ ಎಚ್ಚರಿಸಿದ್ದಾರೆ.