ಕೋಲ್ಕತಾ, ಮೇ. 20 (DaijiworldNews/AA): ಬಿಜೆಪಿಯನ್ನು ದೆಹಲಿಯಿಂದ ಅಧಿಕಾರದಿಂದ ದೂರ ಮಾಡುವ ದಿನಗಳು ದೂರದಲ್ಲಿಲ್ಲ ಎಂದು ಮಾಜಿ ಸಿಎಂ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಕೊಲ್ಕತ್ತಾದ ಕಾಳಿಘಾಟ್ನಲ್ಲಿ ನಡೆದ ಟಿಎಂಸಿ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, "ವಿಧಾನಸಭೆ ಚುನಾವಣೆಯಲ್ಲಿ ಎದುರಿಸಿದ ಹಿನ್ನಡೆಯ ನಡುವೆಯೂ ಪಕ್ಷ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಏನೇ ಆಗಲಿ, ಬಿಜೆಪಿಯ ವಿರುದ್ಧದ ನಮ್ಮ ಹೋರಾಟ ನಿಲ್ಲುವುದಿಲ್ಲ. ಮನೆ ಧ್ವಂಸ ಮಾಡಿದರೂ, ನೋಟಿಸ್ ಕಳುಹಿಸಿದರೂ ನಾನು ತಲೆಬಾಗುವುದಿಲ್ಲ" ಎಂದು ಸಭೆಯಲ್ಲಿ ಹಾಜರಿದ್ದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
"ಈ ರಾಜ್ಯದಲ್ಲಿ ಅನೇಕ ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಆದರೆ, ಇಂತಹ ಮುಖ್ಯಮಂತ್ರಿ ಯಾರೂ ಇರಲಿಲ್ಲ. ಕ್ಯಾಮೆರಾ ಮುಂದೆ ಹಣ ಸ್ವೀಕರಿಸುತ್ತಿರುವ ದೃಶ್ಯ ಕಂಡ ವ್ಯಕ್ತಿಯನ್ನೇ ಮುಖ್ಯಮಂತ್ರಿ ಮಾಡಿದ್ದಾರೆ" ಎಂದು ಪಶ್ಚಿಮ ಬಂಗಾಳದ ನೂತನ ಸಿಎಂ ಸುವೇಂದು ಅಧಿಕಾರಿ ವಿರುದ್ಧವೂ ಪರೋಕ್ಷವಾಗಿ ಕಿಡಿಕಾರಿದ್ದಾರೆ.