ಕೊಡಗು, ಮೇ. 19 (DaijiworldNews/TA): ಕೊಡಗಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ನಡೆದ ಭೀಕರ ಆನೆಗಳ ಕಾಳಗದಲ್ಲಿ ಎಲ್ಲರ ಅಚ್ಚುಮೆಚ್ಚಿನ ಆನೆಯಾಗಿದ್ದ ‘ಮಾರ್ಥಾಂಡ’ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಹಾಗೂ ಗಜಪ್ರೇಮಿಗಳಲ್ಲಿ ದುಃಖ ಮೂಡಿಸಿದೆ.

ಒಂದು ಕಾಲದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ಭಾಗದ ಜನರಿಗೆ ತಲೆನೋವಾಗಿದ್ದ ಈ ಆನೆ, ಬಳಿಕ ದುಬಾರೆ ಶಿಬಿರದಲ್ಲಿ ಸೌಮ್ಯ ಸ್ವಭಾವದಿಂದ ಎಲ್ಲರ ಮನಗೆದ್ದಿತ್ತು. ಆದರೆ, ಎರಡು ಬಲಿಷ್ಠ ಆನೆಗಳ ನಡುವೆ ನಡೆದ ಹಠಾತ್ ಸಂಘರ್ಷದಲ್ಲಿ ಮಾರ್ಥಾಂಡ ಪ್ರಾಣ ಕಳೆದುಕೊಂಡಿದೆ.
ಮಾರ್ಥಾಂಡ ಮೂಲತಃ ಸಕಲೇಶಪುರ ಭಾಗದಲ್ಲಿ ಅಲೆದಾಡುತ್ತಿದ್ದ ಕಾಡಾನೆ. ಆದರೆ ಸಾಮಾನ್ಯ ಕಾಡಾನೆಗಳಂತಿರದೆ, ಜನವಸತಿ ಪ್ರದೇಶಗಳಿಗೆ ನುಗ್ಗಿ ಅಂಗಡಿಗಳ ಬಾಗಿಲು ಒಡೆದು ಅಕ್ಕಿ ತಿನ್ನುವುದರಲ್ಲಿ ಇದಕ್ಕೆ ವಿಚಿತ್ರ ಆಸಕ್ತಿ ಇತ್ತು. ಇದೇ ಕಾರಣಕ್ಕೆ ಸ್ಥಳೀಯರು ಇದನ್ನು “ಅಕ್ಕಿ ಕಳ್ಳ” ಎಂದು ಕರೆಯುತ್ತಿದ್ದರು.
ಅಕ್ಕಿಗಾಗಿ ಗ್ರಾಮಗಳಿಗೆ ನುಗ್ಗುತ್ತಿದ್ದ ಈ ಆನೆಯಿಂದ ಜನರು ಭಯಭೀತರಾಗಿದ್ದು, ಕೊನೆಗೆ 2021ರಲ್ಲಿ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿತ್ತು. ಸೆರೆ ಹಿಡಿದ ಬಳಿಕ ಮಾರ್ಥಾಂಡಗೆ ರೇಡಿಯೋ ಕಾಲರ್ ಅಳವಡಿಸಿ, ದೂರದ ಬಂಡೀಪುರ ಅರಣ್ಯಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಅಕ್ಕಿಯ ರುಚಿ ಮರೆತಿರಲಿಲ್ಲವೇನೋ, ಕಾಡಿನ ದಾರಿಯಲ್ಲೇ ಸುಮಾರು 15 ದಿನಗಳ ಕಾಲ ನಡೆದು ಮತ್ತೆ ಸಕಲೇಶಪುರಕ್ಕೇ ವಾಪಸ್ಸಾಗಿತ್ತು.
ಈ ಘಟನೆ ಅರಣ್ಯ ಅಧಿಕಾರಿಗಳನ್ನೇ ಅಚ್ಚರಿಗೆ ಗುರಿಮಾಡಿತ್ತು. ಬಳಿಕ ಮತ್ತೊಮ್ಮೆ ಕಷ್ಟಪಟ್ಟು ಸೆರೆ ಹಿಡಿದು ದುಬಾರೆ ಆನೆ ಶಿಬಿರಕ್ಕೆ ತರಲಾಗಿತ್ತು. ಶಿಬಿರಕ್ಕೆ ಬಂದ ನಂತರ ಮಾರ್ಥಾಂಡ ಸಂಪೂರ್ಣ ಬದಲಾಗಿತ್ತು. ಮಾವುತರ ಮಾತು ಕೇಳುವ, ಶಾಂತ ಸ್ವಭಾವದ ಆನೆಯಾಗಿ ಅದು ಎಲ್ಲರ ಮೆಚ್ಚುಗೆ ಗಳಿಸಿತ್ತು.
ಆದರೆ ನಿನ್ನೆ ನಡೆದ ಆನೆಗಳ ಕಾಳಗದಲ್ಲಿ ಈ ಸೌಮ್ಯ ಜೀವ ಬಲಿಯಾಗಿದ್ದು, ಗಜಪ್ರೇಮಿಗಳ ಕಣ್ಣೀರಿಗೆ ಕಾರಣವಾಗಿದೆ. ಸಕಲೇಶಪುರದಿಂದ ದುಬಾರೆವರೆಗೆ ರೋಚಕ ಪಯಣ ನಡೆಸಿದ್ದ “ಅಕ್ಕಿ ಪ್ರೇಮಿ” ಮಾರ್ಥಾಂಡನ ಕಥೆ ಈಗ ದುಃಖಾಂತ್ಯ ಕಂಡಿದೆ.