ಕಡಪ, ಮೇ. 19 (DaijiworldNews/TA): “ಸಾವಿನ ನಂತರವೂ ನಾವು ಬೇರೆಯಾಗಬಾರದು” ಎಂಬ ಪ್ರೀತಿಯ ಮಾತನ್ನು ಅಕ್ಷರಶಃ ಸಾಬೀತುಪಡಿಸಿದ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪತ್ನಿಯ ಮೇಲಿನ ಅಪಾರ ಪ್ರೀತಿಯಿಂದ ವ್ಯಕ್ತಿಯೊಬ್ಬರು ಆಕೆಯ ಸಮಾಧಿಯ ಪಕ್ಕದಲ್ಲೇ ಬದುಕಿರುವಾಗಲೇ ತಮ್ಮ ಸಮಾಧಿಯನ್ನು ನಿರ್ಮಿಸಿಕೊಂಡಿದ್ದಾರೆ.

ಕಡಪ ಜಿಲ್ಲೆಯ ಚಿನ್ನ ಚೌಕ್ನ ಸಹಕಾರಿ ಕಾಲೋನಿ ನಿವಾಸಿ ಪಿ. ರಾಮಮೋಹನ್ ರಾಜು ಈ ಅಪರೂಪದ ಪ್ರೀತಿಯ ಉದಾಹರಣೆಯಾಗಿದ್ದಾರೆ. ನಿವೃತ್ತ ಸರ್ಕಾರಿ ಅಧಿಕಾರಿಯಾಗಿದ್ದ ಅವರು ಭವಿಷ್ಯ ನಿಧಿ (PF) ಕಚೇರಿ ಹಾಗೂ ಆಂಧ್ರಪ್ರದೇಶ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.
ರಾಮಮೋಹನ್ ರಾಜು ಮತ್ತು ರಾಜ್ಯಲಕ್ಷ್ಮಿ ಅವರು 1978ರಲ್ಲಿ ವಿವಾಹವಾಗಿದ್ದು, ದಂಪತಿಗೆ ನಾಲ್ಕು ಹೆಣ್ಣುಮಕ್ಕಳಿದ್ದಾರೆ. ಸುಮಾರು 33 ವರ್ಷಗಳ ಸಂತೋಷದ ದಾಂಪತ್ಯ ಜೀವನದ ಬಳಿಕ 2011ರಲ್ಲಿ ರಾಜ್ಯಲಕ್ಷ್ಮಿ ಕ್ಯಾನ್ಸರ್ನಿಂದ ನಿಧನರಾದರು.
ಪತ್ನಿಯ ಅಗಲಿಕೆಯನ್ನು ಸಹಿಸಲಾಗದ ರಾಮಮೋಹನ್ ರಾಜು, ಆಕೆಯ ಸಮಾಧಿಯ ಪಕ್ಕದಲ್ಲೇ ತನಗಾಗಿಯೂ ಸಮಾಧಿ ನಿರ್ಮಿಸಿಕೊಳ್ಳುವ ನಿರ್ಧಾರ ಕೈಗೊಂಡರು. ಈ ಬಗ್ಗೆ ಸ್ಮಶಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಜಾಗ ಕೇಳಿಕೊಂಡ ಅವರು, ಬದುಕಿರುವಾಗಲೇ ತಮ್ಮ ಸಮಾಧಿ ನಿರ್ಮಿಸಿಕೊಂಡಿದ್ದಾರೆ. ಇದರ ಜೊತೆಗೆ, ತಾವು ಮೃತಪಟ್ಟ ಬಳಿಕ ಯಾವುದೇ ಅಡಚಣೆ ಆಗದಂತೆ ತಮ್ಮ ಅಂತ್ಯಕ್ರಿಯೆ ಹಾಗೂ ಸಮಾಧಿ ಕಾರ್ಯಗಳಿಗಾಗಿ ಸುಮಾರು 4 ಲಕ್ಷ ರೂಪಾಯಿಗಳನ್ನು ಪ್ರತ್ಯೇಕವಾಗಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ, ತಮ್ಮ ಅಂತ್ಯಕ್ರಿಯೆ ಸಂಪ್ರದಾಯಬದ್ಧವಾಗಿ ನಡೆಯಬೇಕು ಎಂದು ಸ್ನೇಹಿತರೊಬ್ಬರಿಗೆ 50 ಸಾವಿರ ರೂಪಾಯಿ ಮುಂಗಡವಾಗಿ ನೀಡಿ ಜವಾಬ್ದಾರಿಯನ್ನೂ ವಹಿಸಿದ್ದಾರೆ. ಪತ್ನಿಯ ಮೇಲಿನ ಅವರ ಅಪಾರ ಪ್ರೀತಿ ಮತ್ತು ಬಾಂಧವ್ಯ ಈಗ ಕಡಪ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.