ಜಾರ್ಖಂಡ್, ಮೇ. 19 (DaijiworldNews/TA): ತನ್ನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಯುವತಿಯ ಶವಕ್ಕೆ ಆರೋಪಿಯೇ ಪೊಲೀಸರ ಸಮ್ಮುಖದಲ್ಲಿ ತಾಳಿ ಕಟ್ಟಿದ ವಿಚಿತ್ರ ಹಾಗೂ ಬೆಚ್ಚಿಬೀಳಿಸುವ ಘಟನೆ ಜಾರ್ಖಂಡ್ನ ಗಿರಿದಿಹ್ನಲ್ಲಿ ನಡೆದಿದೆ.

ಮೃತ ಯುವತಿ ಮತ್ತು ಆರೋಪಿ ಮನೀಶ್ ಮುರ್ಮು ನಡುವೆ ಸುಮಾರು ನಾಲ್ಕು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಶೀಘ್ರದಲ್ಲೇ ಮದುವೆ ಮಾಡುವುದಾಗಿ ನಂಬಿಸಿ ಮನೀಶ್ ಯುವತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಎಂದು ತಿಳಿದುಬಂದಿದೆ.
ಆದರೆ ಮನೆಗೆ ಕರೆತಂದ ಬಳಿಕ ಯುವತಿಗೆ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಈ ನಡುವೆ ಮದುವೆ ದಿನಾಂಕ ನಿಗದಿಪಡಿಸುವಂತೆ ಯುವತಿಯ ಕುಟುಂಬ ಒತ್ತಡ ಹೇರಿದಾಗ, ಶುಕ್ರವಾರ ಬೆಳಗ್ಗೆ ಯುವತಿ ಅಸ್ವಸ್ಥಳಾಗಿದ್ದಾಳೆ ಎಂಬ ಮಾಹಿತಿ ಕುಟುಂಬಕ್ಕೆ ತಲುಪಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮನೀಶ್ ನೀಡುತ್ತಿದ್ದ ಹಿಂಸೆ ಸಹಿಸಲಾರದೆ ಯುವತಿ ವಿಷ ಸೇವಿಸಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಆರೋಪಿ ಮನೀಶ್ ಮುರ್ಮುವನ್ನು ಬಂಧಿಸಿದರು. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿತು. ಎರಡೂ ಕುಟುಂಬಗಳ ನಡುವೆ ತೀವ್ರ ವಾಗ್ವಾದ ಉಂಟಾಗಿ, ಯಾರೂ ಯುವತಿಯ ಶವವನ್ನು ಸ್ವೀಕರಿಸಲು ಮುಂದೆ ಬರಲಿಲ್ಲ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಪೊಲೀಸರು ಶವವನ್ನು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲೇ ಇರಿಸಿದರು.
ಮರುದಿನ ಪೊಲೀಸ್ ಬಿಗಿ ಭದ್ರತೆಯಲ್ಲಿ ಶವವನ್ನು ಯುವಕನ ಗ್ರಾಮಕ್ಕೆ ತರಲಾಗಿತ್ತು. ಈ ವೇಳೆ ಗ್ರಾಮಸ್ಥರು ಹಾಗೂ ಯುವತಿಯ ಕುಟುಂಬಸ್ಥರು, “ಮನೀಶ್ ಶವವನ್ನೇ ಮದುವೆಯಾಗಬೇಕು” ಎಂದು ಪಟ್ಟುಹಿಡಿದರು. ಉದ್ರಿಕ್ತ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕಸ್ಟಡಿಯಲ್ಲಿದ್ದ ಮನೀಶ್ನನ್ನು ಸ್ಥಳಕ್ಕೆ ಕರೆತಂದರು. ಬಳಿಕ ನೂರಾರು ಜನರ ಸಮ್ಮುಖದಲ್ಲಿ ಆರೋಪಿ ಯುವತಿಯ ಹಣೆಗೆ ಸಿಂಧೂರ ಹಚ್ಚಿ, ಸಾಂಕೇತಿಕ ವಿವಾಹ ವಿಧಿವಿಧಾನ ನೆರವೇರಿಸಿದನು. ಘಟನೆ ಸ್ಥಳೀಯರಲ್ಲಿ ಆಕ್ರೋಶ ಮತ್ತು ಆಘಾತಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.