ಶಿವಮೊಗ್ಗ, ಮೇ. 19 (DaijiworldNews/TA): ಶಾಪಿಂಗ್ಗೆ ತೆರಳಿದ್ದ ಒಂಬತ್ತು ಮಂದಿ ಲಿಫ್ಟ್ನಲ್ಲಿ ಸಿಲುಕಿ ಆತಂಕದ ಕ್ಷಣಗಳನ್ನು ಅನುಭವಿಸಿದ ಘಟನೆ ಶಿವಮೊಗ್ಗ ನಗರದ ಆಲ್ಕೋಳ ವೃತ್ತದ ಬಳಿಯ ಶಾಪಿಂಗ್ ಮಾಲ್ನಲ್ಲಿ ನಡೆದಿದೆ.

ಭರತ್ (37), ಅನುಷಾ (35), ಅನೀಸ್ ಫಾತಿಮಾ (44), ಮುಸರತ್ (39), ಸೂಬಿಯಾ (31), ಮಿಜ್ಜಾ (09), ಬಿಲಾಲ್ (06), ಪ್ರಶಾಂತ್ (28) ಹಾಗೂ ಪ್ರವೀಣ್ ಕುಮಾರ್ (47) ಲಿಫ್ಟ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡು ಲಿಫ್ಟ್ ಮಧ್ಯದಲ್ಲೇ ನಿಂತುಕೊಂಡಿದೆ.
ಅರ್ಧ ಗಂಟೆಗೂ ಹೆಚ್ಚು ಕಾಲ ಲಿಫ್ಟ್ ಒಳಗೆ ಸಿಲುಕಿದ್ದವರು ಆತಂಕದಿಂದ ಕೂಗಾಡಿದ್ದಾರೆ. ಶಬ್ದ ಕೇಳಿದ ಮಾಲ್ ಸಿಬ್ಬಂದಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಲಿಫ್ಟ್ ತೆರೆಯಲು ಸಾಕಷ್ಟು ಪ್ರಯತ್ನ ನಡೆಸಿದರು. ಕೊನೆಗೆ ಕಬ್ಬಿಣದ ಬಾಗಿಲು ಮುರಿದು ಲಿಫ್ಟ್ ಒಳಗೆ ಸಿಲುಕಿದ್ದ ಒಂಬತ್ತು ಮಂದಿಯನ್ನು ಸುರಕ್ಷಿತವಾಗಿ ಹೊರತೆಗೆದರು. ಈ ಘಟನೆ ಕೆಲಕಾಲ ಶಾಪಿಂಗ್ ಮಾಲ್ನಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.