ನವದೆಹಲಿ, ಮೇ. 19 (DaijiworldNews/AA): ವಡೋದರಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದೊಳಗೆ ಉಂಟಾದ ವಿದ್ಯುತ್ ವ್ಯತ್ಯಯದಿಂದ ಪ್ರಯಾಣಿಕರು 30 ನಿಮಿಷಗಳ ಕಾಲ ಎಸಿ, ಬೆಳಕು ಇಲ್ಲದೇ ಪರದಾಡಿದ್ದಾರೆ.

ಭಾನುವಾರ ರಾತ್ರಿ ವಡೋದರಾದಿಂದ ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನ ರಾತ್ರಿ 8.40ಕ್ಕೆ ಟೇಕ್ ಆಫ್ ಆಗುವ ಮುನ್ನ ನೆಲದ ವಿದ್ಯುತ್ ಘಟಕಕ್ಕೆ (ಗ್ರೌಂಡ್ ಪವರ್ ಯುನಿಟ್- ಜಿಪಿಯು) ಸಂಪರ್ಕಗೊಂಡಿತ್ತು. ಈ ವೇಳೆ ಜಿಪಿಯು ಏಕಾಏಕಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಇದರಿಂದ ವಿಮಾನದ ಒಳಗಡೆ ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲಾಗುವ ಜೊತೆಗೆ ಎಸಿ ಕೂಡ ಸ್ಥಗಿತಗೊಂಡಿತ್ತು. ಪರಿಣಾಮ ವಿಮಾನವು ನಿಗದಿತ ಸಮಯಕ್ಕಿಂತ 80 ನಿಮಿಷ ತಡವಾಗಿ ಟೇಕಾಫ್ ಆಗಿದೆ.
ವಿಮಾನದ ಒಳಗಿದ್ದ 160 ಪ್ರಯಾಣಿಕರು ಸೆಕೆಯಿಂದ ಕತ್ತಲಲ್ಲೇ ಅರ್ಧ ಗಂಟೆ ಕಾಲ ಕಳೆಯುವಂತಾಯಿತು. ಎಸಿ ಕೆಲಸ ಮಾಡದೇ ಇದ್ದ ಕಾರಣ ಕ್ಯಾಬಿನ್ ಒಳಗೆ ಬಿಸಿಯ ವಾತಾವರಣ ನಿರ್ಮಾಣವಾಗಿ ಪ್ರಯಾಣಿಕರು ಪರದಾಡಿದ್ದಾರೆ. ತಾಂತ್ರಿಕ ದೋಷವನ್ನು ಇಂಜಿನಿಯರ್ಗಳು ಸರಿಪಡಿಸಿದ ಬಳಿಕ ಜಿಪಿಯು ಕಾರ್ಯನಿರ್ವಹಿಸತೊಡಗಿತು.