ಬೆಂಗಳೂರು, ಮೇ. 19 (DaijiworldNews/AK): ತುಮಕೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ಆಯೋಜಿಸಿರುವುದು ಯಾವ ಪುರುರ್ಥಕ್ಕೆ. ಈ ಮೂರು ವರ್ಷದಲ್ಲಿ ಸರ್ಕಾರ ಕಡಿದು ಕಟ್ಟೆ ಹಾಕಿದ್ದು ಏನು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅವರು ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯ ಯೋಜನೆಗಳನ್ನು ತಮ್ಮ ಸರ್ಕಾರದ ಯೋಜನೆಗಳು ಎಂಬಂತೆ ಈಗಿನ ಕಾಂಗ್ರೆಸ್ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಹುಬ್ಬಳ್ಳಿಯಲ್ಲಿ ಭಾರಿ ಸಂಖ್ಯೆಯಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಈ ಸರ್ಕಾರ ಆಯೋಜಿಸಿತ್ತು. ಅದೂ ಕೂಡ ಬಿಜೆಪಿ ಸರ್ಕಾರದ ನಿರ್ಧಾರ. ಹಳೆ ಸರ್ಕಾರದ ಕೆಲಸಗಳನ್ನು ತಮ್ಮ ಕೆಲಸ ಎಂದು ಜನರಿಗೆ ತೋರಿಸುತ್ತಿದ್ದಾರೆ ಎಂದು ದೂರಿದರು.
ತುಮಕೂರು ಸಮಾವೇಶ ನಗೆಪಾಟಲಿಗೆ ಈಡಾಗಿದೆ. ಇದರ ಬಗ್ಗೆ ಜನರೇ ನಗುತ್ತಿದ್ದಾರೆ. ಬಿಜೆಪಿ ಈ ಸಮಾವೇಶಕ್ಕೆ ಕೌಂಟರ್ ಆಗಿ ಏನೂ ಮಾಡುವುದಿಲ್ಲ. ಎಂದರು.
ಇವರು ಏನಾದರೂ ಸಾಧನೆ ಮಾಡಿದ್ದರೆ ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು ಹಲವು ದಿನ ಬೀಡು ಬಿಡಬೇಕಾದ ಸ್ಥಿತಿ ಇರುತ್ತಿರಲಿಲ್ಲ. ಮತದಾನಕ್ಕೂ ಮೂರು ದಿನ ಮೊದಲು ಗೃಹಲಕ್ಷ್ಮಿ ಹಣ ನೀಡಿದ್ದಾರೆ. ಜಾಹೀರಾತು ಮೂಲಕ ಆರ್ಥಿಕ ಮತ್ತು ಕಾನೂನು ಸ್ಥಿತಿ ಚೆನ್ನಾಗಿದೆ ಎಂದು ಜನರಿಗೆ ತೋರಿಸುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಸಮಾವೇಶದ ಮೂಲಕ ಮಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪರಿಣಾಮಕಾರಿಯಾದ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಹೋರಾಟ ಮಾಡದೇ ಹೋಗಿದ್ದೇ ಇದ್ದರೆ ವಾಲ್ಮೀಕಿ ಹಗರಣದಲ್ಲಿ ಸಚಿವರು ರಾಜೀನಾಮೆ ನೀಡುತ್ತಿರಲಿಲ್ಲ. ಈ ಸರ್ಕಾರಕ್ಕೆ ಭಂಡತನವಿದೆ. ಏನೇ ನಾವು ಹೋರಾಟ ಮಾಡಿದರೆ ತಾಗುವುದಿಲ್ಲ. ಈ ಭಂಡತನವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ನಾವು ಸಮಯಕ್ಕೆ ಸರಿಯಾಗಿ ಹೋರಾಟ ಮಾಡುತ್ತಿದ್ದೇವೆ. ಈ ಆಟ ಬಹಳ ದಿನ ನಡೆಯುವುದಿಲ್ಲ ಎಂದರು.
ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಮಾವೇಶ..
ಮುಖ್ಯಮಂತ್ರಿ ಕುರ್ಚಿಗೆ ಕಾಳಗ ನಡೆಯುತ್ತಿರುವುದರಿಂದ ನೂರಾರು ಕೋಟಿ ಹಣ ಪೋಲು ಮಾಡಿ ತುಮಕೂರು ಸಮಾವೇಶ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಸಮಾವೇಶ ಮಾಡುತ್ತಿದ್ದಾರೆ. ಇವರ ಸಾಧನೆ ಏನೂ ಇಲ್ಲ. ಕುರ್ಚಿ ಪೈಪೋಟಿಯಿಂದಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಹೋಗಿದೆ ಎಂದು ಹೇಳಿದರು.