ಬೆಂಗಳೂರು, ಮೇ. 19 (DaijiworldNews/TA): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಂದು ಸಾರಿಗೆ ಸಂಘಟನೆಗಳು ಕರೆ ನೀಡಿದ್ದ ರಾಜ್ಯವ್ಯಾಪಿ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ನಾಳೆ ಸಾರಿಗೆ ಸೇವೆಗಳು ಸ್ಥಗಿತಗೊಳ್ಳುವ ಆತಂಕ ತಪ್ಪಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ಕಟ್ಟಡ ಕಾರ್ಮಿಕ ಹಾಗೂ ಮನೆಕೆಲಸದ ಮಹಿಳೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮುಷ್ಕರ ಕೈಬಿಡುವಂತೆ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ. ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಹೇಳಿ, ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ (ಮೇ 21) ಮುಂದೂಡಿದೆ. ಇದೇ ವೇಳೆ ಸಾರಿಗೆ ನೌಕರರ ಸಮಸ್ಯೆಗಳ ಕುರಿತು ಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೂ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
“ರಾಜ್ಯ ಸರ್ಕಾರ ಈಗಾಗಲೇ 12.5% ವೇತನ ಹೆಚ್ಚಳ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಮುಷ್ಕರ ನಡೆಸುವುದು ಸೂಕ್ತವಲ್ಲ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ಸೂಚನೆ ಬಳಿಕ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದು, ಇಂದು ಸಂಜೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು :
* 25% ವೇತನ ಹೆಚ್ಚಳ ಜಾರಿಗೆ ತರಬೇಕು
* 2024ರ ಜನವರಿಯಿಂದಲೇ ಹೆಚ್ಚುವರಿ ವೇತನ ಅನ್ವಯಿಸಬೇಕು
* 26 ತಿಂಗಳ ಬಾಕಿ ವೇತನವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು
* ಭತ್ಯೆ ಹೆಚ್ಚಳ ಮಾಡಬೇಕು
* ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ನೌಕರರ ಕುಟುಂಬಗಳಿಗೆ ಪರಿಹಾರ ನೀಡಬೇಕು
* ಆಡಳಿತಾತ್ಮಕ ಸಮಸ್ಯೆಗಳಿಗೆ ಒಂದು ತಿಂಗಳೊಳಗೆ ಪರಿಹಾರ ಕಲ್ಪಿಸಬೇಕು
* ಬಾಕಿ ಇರುವ ರೂ. 1,272 ಕೋಟಿ ಬಿಡುಗಡೆ ಮಾಡಬೇಕು
ಹೈಕೋರ್ಟ್ ಮಧ್ಯಪ್ರವೇಶದಿಂದಾಗಿ ತಾತ್ಕಾಲಿಕವಾಗಿ ಮುಷ್ಕರ ತಪ್ಪಿದರೂ, ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ಮತ್ತು ಸಂಘಟನೆಗಳ ನಡುವೆ ಮುಂದಿನ ಮಾತುಕತೆ ಮಹತ್ವ ಪಡೆದುಕೊಂಡಿದೆ.