ಬೆಂಗಳೂರು, ಮೇ. 16 (DaijiworldNews/AK): ಪಾಕ್ ಪ್ರಾಯೋಜಿತ ಭಯೋತ್ಪಾದನೆಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಪಾಕಿಸ್ತಾನಕ್ಕೆ ಜಾಗತಿಕ ಭೂಪಟದ ಇತಿಹಾಸ ನೆನಪಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ‘ಸೇನಾ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ತನ್ನ ನೆಲದಲ್ಲಿ ಉಗ್ರರಿಗೆ ಆಶ್ರಯ ನೀಡುವುದನ್ನು ಮತ್ತು ಭಾರತದ ವಿರುದ್ಧ ಸಂಚು ರೂಪಿಸುವುದನ್ನು ಮುಂದುವರಿಸುವ ಮುನ್ನ, ತಾನು ಜಗತ್ತಿನ ಭೂಪಟ ಮತ್ತು ಇತಿಹಾಸದ ಭಾಗವಾಗಿ ಉಳಿಯಬೇಕೇ ಅಥವಾ ಬೇಡವೇ ಎಂಬುದನ್ನು ಮೊದಲು ನಿರ್ಧರಿಸಿಕೊಳ್ಳಲಿ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.
ಸದಾ ಸೈನಿಕರನ್ನು ಪ್ರಚೋದಿಸುವ ಹಾಗೂ ಗಡಿಯಲ್ಲಿ ಉಗ್ರರನ್ನು ನುಸುಳಿಸುವ ಪಾಕಿಸ್ತಾನದ ಕುತಂತ್ರಕ್ಕೆ ಭಾರತ ಇನ್ನು ಮುಂದೆ ಮೌನವಾಗಿ ಕೂರುವುದಿಲ್ಲ, ಬದಲಿಗೆ ಅತ್ಯಂತ ಪ್ರಖರ ಮತ್ತು ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಸೇನಾ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.