ಬೆಂಗಳೂರು, ಮೇ. 15 (DaijiworldNews/TA): ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು 64ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಡಿಕೆಶಿ ನಿವಾಸದ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿ ನೆಚ್ಚಿನ ನಾಯಕರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಕೇಕ್ ಕಟ್ ಮಾಡಿ, ಘೋಷಣೆ ಕೂಗಿ, ಬ್ಯಾನರ್ಗಳು ಮತ್ತು ಹೂಮಾಲೆಗಳ ಮೂಲಕ ಅಭಿಮಾನಿಗಳು ಶುಭಾಶಯ ತಿಳಿಸಿದರು.

ರಾಜ್ಯ ರಾಜಕೀಯದಲ್ಲಿ “ಟ್ರಬಲ್ ಶೂಟರ್” ಎಂದೇ ಖ್ಯಾತಿ ಪಡೆದಿರುವ ಡಿಕೆ ಶಿವಕುಮಾರ್, ಖಡಕ್ ನಿರ್ಧಾರಗಳು ಮತ್ತು ನೇರ ನುಡಿಯ ಮೂಲಕ ತಮ್ಮದೇ ಆದ ಪ್ರಭಾವ ಬೆಳೆಸಿಕೊಂಡಿದ್ದಾರೆ. ಸಂಕಷ್ಟದ ಸಂದರ್ಭಗಳಲ್ಲಿ ಪಕ್ಷದ ಪರ ಬಂಡೆಯಂತೆ ನಿಂತು ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಿದ ನಾಯಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರು 1980ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶ ಮಾಡಿದರು. 1989ರಲ್ಲಿ ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಅವರು, ಅಂದಿನ ಯುವ ನಾಯಕರಲ್ಲಿ ಗಮನ ಸೆಳೆದಿದ್ದರು. ನಂತರ ಹಲವು ಬಾರಿ ಶಾಸಕರಾಗಿ ಗೆದ್ದು, ಕನಕಪುರ ಕ್ಷೇತ್ರವನ್ನು ತಮ್ಮ ರಾಜಕೀಯ ಭದ್ರಕೋಟೆಯಾಗಿ ರೂಪಿಸಿಕೊಂಡರು.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿಕೆ ಶಿವಕುಮಾರ್ ಮಹತ್ವದ ಪಾತ್ರ ವಹಿಸಿದ್ದರು. ಸರ್ಕಾರ ರಚನೆಯಾದ ಬಳಿಕ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಅವರ ಆಸೆ ಇನ್ನೂ ಜೀವಂತವಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಿರಂತರವಾಗಿ ಕೇಳಿಬರುತ್ತಿದೆ.
ರಾಜ್ಯದಲ್ಲಿ ಈಗ ಪವರ್ ಶೇರಿಂಗ್ ಒಪ್ಪಂದ ಮತ್ತು ನಾಯಕತ್ವ ಬದಲಾವಣೆಯ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸುತ್ತಿರುವ ಹಿನ್ನೆಲೆ, ಮುಂದಿನ ಅವಧಿಯಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.
ಇತ್ತೀಚಿನ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಡಿಕೆಶಿ ತಮ್ಮ ಮುಖ್ಯಮಂತ್ರಿ ಆಸೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದರೆಂಬ ವಿಶ್ಲೇಷಣೆ ಕೂಡ ಕೇಳಿಬರುತ್ತಿದೆ. ಹೈಕಮಾಂಡ್ ನಾಯಕರೊಂದಿಗೆ ಆಪ್ತ ಸಂಪರ್ಕ ಹೊಂದಿರುವ ಡಿಕೆಶಿಗೆ ಪಕ್ಷದ ವರಿಷ್ಠರು ಗ್ರೀನ್ ಸಿಗ್ನಲ್ ನೀಡುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲೂ ಹೆಚ್ಚಾಗಿದೆ.
ಮೇ 20ರಂದು ತುಮಕೂರಿನಲ್ಲಿ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಮಹತ್ವದ ರಾಜಕೀಯ ಬದಲಾವಣೆಗಳಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಡಿಕೆ ಶಿವಕುಮಾರ್ ಭವಿಷ್ಯದ ರಾಜಕೀಯ ಹೆಜ್ಜೆಗಳತ್ತ ಎಲ್ಲರ ಕಣ್ಣು ನೆಟ್ಟಿದೆ.