ಬೆಂಗಳೂರು, ಮೇ. 15 (DaijiworldNews/TA): ರಾಜ್ಯದ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಸಿಹಿ ಸುದ್ದಿ ನೀಡಿದೆ. ರಾಜ್ಯ ಸರ್ಕಾರ ಮೇ 11ರಿಂದ ನೂತನ ‘ಆಲ್ಕೋಹಾಲ್ ಇನ್ ಬೆವರೇಜ್’ (AiB) ನೀತಿಯನ್ನು ಜಾರಿಗೆ ತಂದಿದ್ದು, ಇದರ ಪರಿಣಾಮವಾಗಿ ಪ್ರೀಮಿಯಂ ಬಿಯರ್ ಹಾಗೂ ವಿದೇಶಿ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಆದರೆ ಕಡಿಮೆ ದರದ ಮದ್ಯ ಬಳಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಹೊಸ ಅಬಕಾರಿ ನೀತಿಯ ಪ್ರಕಾರ, ಶೇ 5ರಷ್ಟು ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಮತ್ತು ಲಾಗರ್ ಬಿಯರ್ಗಳ ದರದಲ್ಲಿ ಶೇ 20ರಿಂದ 25ರಷ್ಟು ಇಳಿಕೆ ಕಂಡುಬಂದಿದೆ. ಜನಪ್ರಿಯ ಬ್ರಾಂಡ್ಗಳಾದ ಕಿಂಗ್ಫಿಶರ್ ಪ್ರೀಮಿಯಂ ಮತ್ತು ಅಲ್ಟ್ರಾ 650 ಎಂಎಲ್ ಬಾಟಲಿಗಳ ಬೆಲೆಯಲ್ಲಿ ಸುಮಾರು ರೂ.75ರವರೆಗೆ ಕಡಿತವಾಗಿದೆ. ಹೈನೆಕೆನ್ ಬಿಯರ್ ಮೇಲೆ ರೂ.70, ಯುಬಿ ಎಕ್ಸ್ಪೋರ್ಟ್ ಮೇಲೆ ರೂ.25 ಹಾಗೂ ಬಡ್ವೈಸರ್ ಪ್ರೀಮಿಯಂ ಮೇಲೆ ರೂ.20ರವರೆಗೆ ದರ ಇಳಿಕೆಯಾಗಿದೆ.
ಬಿಯರ್ ಮಾತ್ರವಲ್ಲದೆ, ವಿದೇಶಿ ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯೂ ಶೇ 20ರಷ್ಟು ಇಳಿಕೆಯಾಗಿದೆ. ಜನಪ್ರಿಯ ಬ್ರಾಂಡ್ಗಳಾದ ಬ್ಲ್ಯಾಕ್ ಲೇಬಲ್ ಮತ್ತು ಶಿವಾಸ್ ರೀಗಲ್ 750 ಎಂಎಲ್ ಬಾಟಲಿಗಳ ಬೆಲೆ ರೂ.5,190ರಿಂದ ರೂ.4,100ಕ್ಕೆ ಇಳಿದಿದೆ. ಇದರಿಂದ ಪ್ರೀಮಿಯಂ ಮದ್ಯ ಬಳಕೆದಾರರಿಗೆ ದೊಡ್ಡ ಮಟ್ಟದ ಲಾಭವಾಗಲಿದೆ.
ಆದರೆ ಸಾಮಾನ್ಯ ಜನರು ಬಳಸುವ ಕಡಿಮೆ ದರದ ಮದ್ಯದ ಬೆಲೆ ಏರಿಕೆಯಾಗಿದೆ. ಸರ್ಕಾರದ ಹೊಸ ತೆರಿಗೆ ವ್ಯವಸ್ಥೆಯಿಂದ ಕಡಿಮೆ ಬೆಲೆಯ ಮದ್ಯದ ಮೇಲೆ ಹೆಚ್ಚಿನ ಹೊರೆ ಬಿದ್ದಿದ್ದು, ಇದು ಸಾಮಾನ್ಯ ಗ್ರಾಹಕರ ಅಸಮಾಧಾನಕ್ಕೂ ಕಾರಣವಾಗಿದೆ.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಈ AiB ನೀತಿ ದೇಶದಲ್ಲೇ ಮೊದಲ ಪ್ರಯೋಗವಾಗಿದ್ದು, ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆ ಇದಾಗಿದೆ. ಈ ಹಿಂದೆ ಇದ್ದ 16 ತೆರಿಗೆ ಸ್ಲ್ಯಾಬ್ಗಳನ್ನು ಈಗ 8ಕ್ಕೆ ಇಳಿಸಲಾಗಿದೆ. ಸುಮಾರು ಆರು ದಶಕಗಳ ಹಳೆಯ ತೆರಿಗೆ ಪದ್ಧತಿಯನ್ನು ಕೈಬಿಟ್ಟು ಹೊಸ ಮಾದರಿಯ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಸರ್ಕಾರದ ಈ ನಿರ್ಧಾರದಿಂದ ಪ್ರೀಮಿಯಂ ಮದ್ಯ ಮಾರುಕಟ್ಟೆಗೆ ಉತ್ತೇಜನ ಸಿಗುವ ನಿರೀಕ್ಷೆ ಇದ್ದರೂ, ಕಡಿಮೆ ಆದಾಯದ ವರ್ಗದ ಮದ್ಯಪ್ರಿಯರ ಮೇಲೆ ಬೆಲೆ ಏರಿಕೆಯ ಹೊರೆ ಹೆಚ್ಚಾಗಿದೆ.