ಬೆಂಗಳೂರು, ಮೇ. 14 (DaijiworldNews/AK): ಅಭಿವೃದ್ಧಿಯನ್ನು ಮರೆತು ಹಿಂದೂಗಳಿಗೆ ಅಪಮಾನ ಮಾಡಿಕೊಂಡು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರಕಾರದ ಆಡಳಿತಕ್ಕೆ ಇತಿಶ್ರೀ ಹಾಡುವ ದಿನಗಳು ಬಂದೇ ಬರಲಿವೆ. ಆಗ ರಾಜ್ಯದ ಜನರೂ ಇದಕ್ಕೆ ಉತ್ತರ ಕೊಡಲಿದ್ದಾರೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಜಾಬ್ಗೆ ಅವಕಾಶ ಕೊಡುವುದಾಗಿ ಅಧಿಕೃತ ಮುದ್ರೆಯನ್ನು ಒತ್ತಲಾಗಿದೆ. ಶಿಕ್ಷಣ ಸಚಿವರು ಹೇಳಿರುವುದು ಖಂಡಿತ ಸರಿಯಲ್ಲ ಎಂದು ಆಕ್ಷೇಪಿಸಿದರು.
ಮಾಡಬೇಕಾದ ಕೆಲಸಗಳು ನೂರಾರಿವೆ. ಅದನ್ನು ಬಿಟ್ಟು ಶಾಲಾ, ಕಾಲೇಜುಗಳಲ್ಲೂ ಹಿಂದೂಗಳು, ಮುಸಲ್ಮಾನರೆಂದು ಬೆಂಕಿ ಹಚ್ಚುವ ಕೆಲಸಕ್ಕೆ ಕಾಂಗ್ರೆಸ್ ಸರಕಾರ ಕೈ ಹಾಕಿದೆ; ಬರುವ ದಿನಗಳಲ್ಲಿ ರಾಜ್ಯದ ಜನರು ಇದಕ್ಕೆ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ ಬಿಜೆಪಿ ಸರಕಾರವು ಹಿಜಾಬ್ ನಿಷೇಧಿಸಿತ್ತು. ಇವತ್ತು ಅದು ನ್ಯಾಯಾಲಯದ ಕಟಕಟೆಯಲ್ಲಿದೆ. ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಯಾವ ಮಟ್ಟಕ್ಕೆ ತೆರಳಲೂ ಇವರು ಹೇಸುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಟೀಕಿಸಿದರು.
ಓಲೈಕೆ ರಾಜಕಾರಣ ಒಂದು ಕಡೆಯಾದರೆ, ಹಿಂದೂಗಳಿಗೆ ಅಪಮಾನ ಮಾಡುವ ಕೆಲಸವನ್ನು ನಿರಂತರವಾಗಿ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ರಾಜ್ಯ ಸರಕಾರವು ಅಧಿಕಾರದ ದರ್ಪ, ಮದದಿಂದ ಮನಬಂದಂತೆ ತೀರ್ಮಾನ ತೆಗೆದುಕೊಳ್ಳುತ್ತಿದೆ. ಹಿಂದೂಗಳ ವಿರುದ್ಧ ಮುಸಲ್ಮಾನರನ್ನು ಹಾಗೂ ಮುಸಲ್ಮಾನರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಷಡ್ಯಂತ್ರ, ಕುತಂತ್ರವನ್ನು ಈ ಕಾಂಗ್ರೆಸ್ ಸರಕಾರದ ನಿರ್ಧಾರಗಳಲ್ಲಿ ನಾವು ನೋಡುತ್ತಿದ್ದೇವೆ ಎಂದು ವಿಶ್ಲೇಷಿಸಿದರು.
ಉಪ ಚುನಾವಣೆ ಗೆದ್ದ ಅಮಲಿನಲ್ಲಿ ಕಾಂಗ್ರೆಸ್ಸಿನವರು ಇಂಥ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರಬಹುದು ಎಂದು ಅವರು ನುಡಿದರು. ಹಿಂದೆ 2018ರಲ್ಲಿ ಈ ಸರಕಾರ ತೊಲಗುವ ಮುಂಚಿತವಾಗಿ 2 ಉಪ ಚುನಾವಣೆಗಳಲ್ಲಿ ಗೆದ್ದಿತ್ತು. ಆಮೇಲೆ ಜನರು ಪಾಠ ಕಲಿಸಿದ್ದರು ಎಂಬುದನ್ನು ಮುಖ್ಯಮಂತ್ರಿಗಳಿಗೆ ನೆನಪಿಸಲು ಬಯಸುವುದಾಗಿ ಹೇಳಿದರು.