ಬೆಂಗಳೂರು,ಮೇ. 14 (DaijiworldNews/AK): ಶಾಲೆಗಳಲ್ಲಿ ವಸ್ತ್ರಸಂಹಿತೆ ಇರಬೇಕೇ ಬೇಡವೇ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ಗೆ ಅನುಮತಿ ನೀಡಿ, ಜನಿವಾರ- ರುದ್ರಾಕ್ಷಿಯನ್ನೂ ಎಳೆದು ತಂದು, ಕೇಸರಿ ಶಾಲಿಗೆ ನಿಷೇಧ ಹೇರಿ ಒಂದು ಸುತ್ತೋಲೆಯನ್ನು ಸರಕಾರ ಹೊರಡಿಸಿದೆ ಎಂದರು.
ಬಿಜೆಪಿ, ಹಿಜಾಬ್ ವಿರೋಧಿಯಲ್ಲ; ನಾವು ಹಿಜಾಬ್ ವಿರೋಧಿಸಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಯಾವಾಗಿನಿಂದ ಯೂನಿಫಾರಂ (ವಸ್ತ್ರಸಂಹಿತೆ) ಆರಂಭವಾಗಿದೆ? ಯಾವ ಉದ್ದೇಶಕ್ಕೆ ಅದು ಪ್ರಾರಂಭವಾಗಿದೆ? ಎಂದು ಕೇಳಿದ ಅವರು, ಅಕ್ಷರ ಮತ್ತು ಜ್ಞಾನ ಹೆಚ್ಚಿಸಬೇಕಾದ ಶಿಕ್ಷಣ ಸಚಿವರಿಗೆ ಅದರ ಉದ್ದೇಶದ ಬಗ್ಗೆಯೂ ಸ್ಪಷ್ಟತೆ ಇಲ್ಲ. ಅದರ ಇತಿಹಾಸದ ಅರಿವೂ ಇಲ್ಲ. ಕೇವಲ ಮತೀಯ ಓಲೈಕೆಯ ರಾಜನೀತಿಯ ಭಾಗವಾಗಿ ಶಾಲೆಗಳಲ್ಲಿ ಮತೀಯ ಭಾವನೆಗಳಿಗೆ ಜಾತ್ಯತೀತತೆಯ ಹೆಸರಿನಲ್ಲಿ ಅನುಮತಿ ಕೊಟ್ಟಿದ್ದಾರೆ ಎಂದರು.
ಶಾಲೆಗಳಲ್ಲಿ ಎಲ್ಲ ಮಕ್ಕಳೂ ಸಮಾನರು. ಅವರು ಬೇರೆ ಬೇರೆ ಮತ, ಸಂಪ್ರದಾಯಗಳಿಗೆ ಸೇರಿದ್ದರೂ ಅವರೆಲ್ಲ ಸಮಾನವಾಗಿ ಗುರುತಿಸಿಕೊಳ್ಳಬೇಕೆಂಬ ಉದ್ದೇಶದಿಂದ ಶಾಲಾ, ಕಾಲೇಜುಗಳಲ್ಲಿ ಯೂನಿಫಾರಂ ಅಳವಡಿಸಲಾಗಿದೆ ಎಂದು ವಿವರಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮಿಷನರಿಗಳು, ಮೈಸೂರು ಸಂಸ್ಥಾನದ ಕಾಲಘಟ್ಟದಲ್ಲೂ ಸ್ವಾತಂತ್ರ್ಯ ಪೂರ್ವದಲ್ಲೇ ನಮ್ಮಲ್ಲಿ ಯೂನಿಫಾರಂ ವ್ಯವಸ್ಥೆಯನ್ನು ಜಾರಿಗೆ ತಂದರು ಎಂದು ತಿಳಿಸಿದರು. ಯಾವುದೇ ಸಂದರ್ಭದಲ್ಲಿ ಯೂನಿಫಾರಂ ಒಳಗೆ ಹಿಜಾಬ್ ಪ್ರವೇಶ ಮಾಡಿರಲಿಲ್ಲ ಎಂದರು
1983ರಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆಯ ಮೂಲಕ ವಸ್ತ್ರಸಂಹಿತೆಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಆಯಾ ಶಾಲಾ, ಕಾಲೇಜಿನ ಆಡಳಿತ ಮಂಡಳಿಗೆ ಸ್ವಾಯತ್ತತೆ, ಜವಾಬ್ದಾರಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಭಾರತವು ದೇವನೊಬ್ಬ ನಾಮ ಹಲವು ಎಂಬ ನಂಬಿಕೆಯ ದೇಶ .
ಸರಕಾರ ಇದೀಗ ಮತೀಯ ಓಲೈಕೆ ರಾಜಕಾರಣ ಮುಂದುವರೆಸಿದೆ. ಅದರ ಪರಿಣಾಮವಾಗಿ ಶಾಲೆಗಳಲ್ಲಿ ಹಿಜಾಬ್ಗೆ ಅನುಮತಿ ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು.