ಬೆಂಗಳೂರು,ಮೇ. 14 (DaijiworldNews/AK): ರಾಜ್ಯ ಸರಕಾರವು ಶಾಲೆಗಳ ಮೂಲಭೂತ ಸೌಕರ್ಯಗಳ ಕಡೆ ಹೆಚ್ಚಿನ ಗಮನ ಕೊಡಬೇಕಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಅನುದಾನಗಳಿಲ್ಲ. ಮಳೆ ಬಂದಾಗ ನೀರು ಸೋರಿಕೆಯಾಗಿ ವಿದ್ಯಾರ್ಥಿಗಳು ಪರದಾಡುವ ಸಂದರ್ಭಗಳಿವೆ. ಅವನ್ನೆಲ್ಲ ಪರಿಶೀಲಿಸಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತನ್ನು ಕೊಡಬೇಕೆಂದು ಒತ್ತಾಯಿಸಿದರು.
ಶಿಸ್ತು, ಭೇದಭಾವವಿಲ್ಲದೇ, ಶ್ರೀಮಂತ-ಬಡವ ಎಂಬ ಭಾವನೆಗೆ ಅವಕಾಶ ಇರದಂತೆ ಶಾಲೆ ನಡೆಯಬೇಕೆಂಬ ಉದ್ದೇಶದಿಂದ ಸಮವಸ್ತ್ರ ವ್ಯವಸ್ಥೆಯನ್ನು ಶಾಲಾ, ಕಾಲೇಜುಗಳಲ್ಲಿ ಜಾರಿ ಮಾಡಲಾಗಿದೆ. ಹಿಜಾಬ್ ಆದೇಶ ಹಿಂಪಡೆಯುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ದಾವಣಗೆರೆ ಉಪ ಚುನಾವಣೆ ಸಂದರ್ಭದಲ್ಲೂ ಮತ್ತೊಮ್ಮೆ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಮುಂದಾಗಿದ್ದರು ಎಂದು ದೂರಿದರು. ಮುಂದಿನ ಚುನಾವಣೆಗಳಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ಸನ್ನು ಕೈಬಿಡುವರೇ? ಎಂಬ ಆತಂಕ ಕಾಂಗ್ರೆಸ್ಸಿಗರದು. ಎಂಐಎಂ ಅಥವಾ ಮುಸ್ಲಿಂ ಲೀಗಿನ ಮೂಲಕ ಸಂಘಟನೆ ಮಾಡಿ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆಯುವ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್, ತನ್ನ ಸ್ವಾರ್ಥ ಮತ್ತು ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸರಕಾರ ಹಿಜಾಬ್ ನಿಷೇಧಿಸಿದಾಗ ಈ ವಿಷಯ ಕೋರ್ಟ್ ಮೆಟ್ಟಿಲೇರಿರಲಿಲ್ಲ. ನಂತರ ಅದು ಕೋರ್ಟ್ ಮೆಟ್ಟಿಲೇರಿದ್ದು, ಸರಕಾರದ ಪರ ಆದೇಶ ಆಗಿತ್ತು ಎಂದು ಗಮನ ಸೆಳೆದರು. ಸುಪ್ರೀಂ ಕೋರ್ಟಿನಲ್ಲಿ ಈ ಸಂಬಂಧ ಆದೇಶ ಬಾಕಿ ಇದೆ. ಸುಪ್ರೀಂ ಕೋರ್ಟಿನಲ್ಲಿ ಒಂದು ವಿಷಯ ಬಾಕಿ ಇರುವಾಗ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಇದು ನ್ಯಾಯಾಲಯದ ನಿಂದನೆಯಾಗುತ್ತದೆ. ಮಧು ಬಂಗಾರಪ್ಪ ಮತ್ತು ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಕಾನೂನಿನ ತಜ್ಞರ ಅಭಿಪ್ರಾಯ ಪಡೆದುಕೊಳ್ಳಬೇಕಿತ್ತು ಎಂದು ನುಡಿದರು.
ಸರಕಾರ ತನ್ನ ಆದೇಶದಿಂದ ಹಿಂದಕ್ಕೆ ಸರಿಯಲು ಮನವಿ ಮಾಡಿದರು. ಇಲ್ಲವಾದರೆ ಇದರ ವಿರುದ್ಧ ಹೋರಾಟದ ಎಚ್ಚರಿಕೆ ನೀಡಲು ಬಯಸುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಹಿಂದೂ ಬಾಂಧವರು ಕೇಸರಿ ಶಾಲು ಧರಿಸಿ, ಕೇಸರಿ ಪಂಚೆ ಉಟ್ಟುಕೊಂಡು ಹೋದಾಗ ಮತ್ತಷ್ಟು ಗೊಂದಲವಾಗುವ ಸಾಧ್ಯತೆ ಇದೆ. ಅಂಥ ಗೊಂದಲಗಳಿಗೆ ಅವಕಾಶ ಕೊಡಬಾರದು; ಹಿಜಾಬ್ಗೆ ಅನುಮತಿ ನೀಡಿದರೆ ಮುಂದಿನ ಅನಾಹುತಗಳಿಗೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.