ನವದೆಹಲಿ, ಮೇ. 14 (DaijiworldNews/AA): 10 ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರ ಹೆಸರನ್ನು ಎಐಸಿಸಿ ಘೋಷಿಸಿದೆ.

ಎಐಸಿಸಿ ಕೇರಳ ಉಸ್ತುವಾರಿ ದೀಪಾ ದಾಸ್ಮುನ್ಸಿ ಹಾಗೂ ಪಕ್ಷದ ಕೇಂದ್ರ ವೀಕ್ಷಕರಾದ ಅಜಯ್ ಮಾಕನ್ ಮತ್ತು ಮುಕುಲ್ ವಾಸ್ನಿಕ್ ಅವರು ಸುದ್ದಿಗೋಷ್ಠಿಯಲ್ಲಿ ನೂತನ ಸಿಎಂ ಹೆಸರು ಘೋಷಿಸಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ನಿರಂತರ ಸಭೆಗಳನ್ನು ನಡೆಸಿದ ಬಳಿಕ ವಿ.ಡಿ. ಸತೀಶನ್ ಅವರನ್ನು ಕೇರಳದ ನೂತನ ಸಿಎಂ ಆಯ್ಕೆ ಮಾಡಿದ್ದಾರೆ.
ಯುಡಿಎಫ್ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವಿ.ಡಿ. ಸತೀಶನ್ ಅವರ ಆಯ್ಕೆಗೆ ಬೆಂಬಲ ವ್ಯಕ್ತಪಡಿಸಿತ್ತು. ಇನ್ನು ಕೇರಳ ರಾಜ್ಯದ ನೂತನ ಸಿಎಂ ಆಗಿ ವಿ.ಡಿ.ಸತೀಶನ್ ಆಯ್ಕೆ ಬೆನ್ನಲ್ಲೇ ತಿರುವನಂತಪುರಂನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆದಿದೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳೊಂದಿಗೆ ಭರ್ಜರಿ ಬಹುಮತ ಪಡೆದಿದ್ದರೂ ಮುಖ್ಯಮಂತ್ರಿ ಆಯ್ಕೆ ಮಾಡಿರಲಿಲ್ಲ. ಸಿಎಂ ಸ್ಥಾನಕ್ಕಾಗಿ ಪಕ್ಷದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.