ಕೋಲ್ಕತ್ತಾ, ಮೇ. 14 (DaijiworldNews/AA): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೋತ ಬಳಿಕ ರಾಜ್ಯದಲ್ಲಿ ಹಿಂಸಾಚಾರ ನಡೆದಿದ್ದು, ಇದರ ವಿಚಾರಣೆಗಾಗಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಲಾಯರ್ ಕೋಟ್ ಧರಿಸಿ ಕೋಲ್ಕತ್ತಾ ಹೈಕೋರ್ಟ್ಗೆ ಹಾಜರಾಗಿದ್ದಾರೆ.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, "ನ್ಯಾಯಾಲಯಕ್ಕೆ ಹಾಜರಾಗುವುದು ಮಮತಾ ಬ್ಯಾನರ್ಜಿಯವರ ನಿರಂತರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಅವರು ಬಂಗಾಳದ ಜನರನ್ನು ಅವರ ಅಗತ್ಯದ ಸಮಯದಲ್ಲಿ ಎಂದಿಗೂ ಕೈಬಿಡುವುದಿಲ್ಲ" ಎಂದು ತಿಳಿಸಿದೆ.
"ಸತ್ಯ, ನ್ಯಾಯ ಮತ್ತು ಸಾಂವಿಧಾನಿಕ ಮೌಲ್ಯಗಳಿಗಾಗಿ ಮಮತಾ ಬ್ಯಾನರ್ಜಿ ಅವರು ಹೋರಾಟದಲ್ಲಿ ಬದ್ಧರಾಗಿದ್ದಾರೆ. ಎಸ್ಐಆರ್ ಅನ್ಯಾಯ, ಬಿಜೆಪಿಯ ಅಶಿಸ್ತಿನ ನಡವಳಿಕೆಯ ವಿರುದ್ಧ ದೃಢವಾಗಿ ನಿಂತಿರುವ ಅವರಂತಹ ನಾಯಕಿ ದೇಶದಲ್ಲಿ ಬೇರೆ ಯಾರೂ ಇಲ್ಲ ಎಂದು ನಿರಂತರವಾಗಿ ಸಾಬೀತುಪಡಿಸುತ್ತಲೇ ಇದ್ದಾರೆ" ಎಂದು ಪೋಸ್ಟ್ ಮಾಡಿದೆ.
ಮೇ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ, ರಾಜ್ಯಾದ್ಯಂತ ಅನೇಕ ಜಿಲ್ಲೆಗಳಲ್ಲಿ ಘರ್ಷಣೆಗಳು, ವಿಧ್ವಂಸಕ ಕೃತ್ಯಗಳು, ಬಾಂಬ್ ದಾಳಿಗಳು ಸೇರಿದಂತೆ ಸಿಎಂ ಸುವೇಂದು ಅಧಿಕಾರಿ ಅವರ ಪಿಎ ಚಂದ್ರನಾಥ್ ರಥ ಅವರ ಹತ್ಯೆ ನಡೆದಿದ್ದವು. ಈ ದಾಳಿಗೆ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರಣ ಎಂದು ಎರಡೂ ಪಕ್ಷಗಳು ಪರಸ್ಪರ ದೂಷಿಸುತ್ತಿವೆ.