ಚೆನ್ನೈ, ಮೇ. 13 (DaijiworldNews/AK):ಮುಖ್ಯಮಂತ್ರಿ ಜೋಸೆಫ್ ವಿಜಯ್ ಪರವಾಗಿ ವಿಶ್ವಾಸ ಮತ ಚಲಾಯಿಸಿದ 25 ಶಾಸಕರನ್ನ ಎಐಎಡಿಎಂಕೆ ಯು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿದೆ ಎಂದು ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ತಿಳಿಸಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ದಳಪತಿ ವಿಜಯ್ ಪರ ಸಿವಿ ಷಣ್ಮುಗಂ ಬಣದ ನಾಯಕರು ವಿಶ್ವಾಸ ಮತ ಚಲಾಯಿಸಿದ ಕೆಲ ಗಂಟೆಗಳ ಬಳಿಕ ಅಣ್ಣಾಡಿಎಂಕೆ ಮುಖ್ಯಸ್ಥರು ಈ ನಿರ್ಧಾರ ಪ್ರಕಟಿಸಿದ್ದಾರೆ.
ಅಣ್ಣಾಡಿಎಂಕೆ ಪಕ್ಷದ 47 ಶಾಸಕರ ಪೈಕಿ 25 ಮಂದಿ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದರು. ಸಿ.ವಿ ಷಣ್ಮುಗಂ ಸೇರಿ 25 ಶಾಸಕರ ವಿರುದ್ಧ ಪಳನಿಸ್ವಾಮಿ ಕ್ರಮ ಕೈಗೊಂಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಕಾಯ್ದೆ ಅಡಿಯಲ್ಲಿ 25 ಶಾಸಕರನ್ನ ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿದ್ದಾರೆ. ಜೊತೆಗೆ ಅವರ ಸ್ಥಾನಗಳಲ್ಲಿ ಹೊಸ ಜಿಲ್ಲಾ ಕಾರ್ಯದರ್ಶಿಗಳನ್ನ ನೇಮಕ ಮಾಡಿದ್ದಾರೆ.
ಸದನದಲ್ಲಿ ಸಂಖ್ಯಾಬಲ ಸಾಬೀತುಪಡಿಸಬೇಕಾದ ಟಿವಿಕೆ ಸರ್ಕಾರದ ವಿರುದ್ಧ ಮತ ಚಲಾಯಿಸುವಂತೆ ನಿನ್ನೆಯೇ ವಿಪ್ ಜಾರಿಗೊಳಿಸಲಾಗಿತ್ತು. ಆದರೂ ವಿಜಯ್ ಅವರ ಪರವಾಗಿ ಮತಚಲಾಯಿಸಿ ಪಕ್ಷ ವಿರೋಧಿ ನಡೆ ತೋರಿಸಿದ್ದಾರೆ. ಹೀಗಾಗಿ ಮತ ಚಲಾಯಿಸಿದ ಶಾಸಕರನ್ನ ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಎಂದು ಪಳನಿಸ್ವಾಮಿ ತಿಳಿಸಿದ್ದಾರೆ.
ಇಂದು ವಿಶ್ವಾಸಮತ ಯಾಚನೆ ಪರೀಕ್ಷೆಯಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಪಾಸ್ ಆಗಿದ್ದಾರೆ. ಸರ್ಕಾರಕ್ಕೆ 144 ಮಂದಿ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಟಿವಿಕೆ, ಕಾಂಗ್ರೆಸ್, ಸಿಪಿಎಂ, ಸಿಪಿಐ, ಮುಸ್ಲಿಮ್ ಲೀಗ್, ವಿಸಿಕೆ ಜೊತೆ ಎಐಎಡಿಎಂಕೆಯ ಬಂಡಾಯ ಎದ್ದಿರುವ 27 ಶಾಸಕರು ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ಬಹುಮತ ಸಾಬೀತು ಪಡಿಸುವ ವೇಳೆ ಡಿಎಂಕೆ ಮತ್ತು ಪಿಎಂಕೆ ಶಾಸಕರು ಸಭಾತ್ಯಾಗ ಮಾಡಿದರು. ಒಬ್ಬ ಬಿಜೆಪಿ ಶಾಸಕರು ಮತದಾನದಿಂದ ದೂರ ಉಳಿದರು. ಅದರೆ ಸದನದಲ್ಲಿದ್ದ 22 ಎಐಎಡಿಎಂಕೆ ಶಾಸಕರು ವಿಶ್ವಾಸಮತದ ವಿರುದ್ಧ ಮತ ಹಾಕಿದರು.