ನವದೆಹಲಿ, ಮೇ. 13 (DaijiworldNews/AK): ಕೇರಳಂನಲ್ಲಿ ಮುಖ್ಯಮಂತ್ರಿಯ ಆಯ್ಕೆಯ ಬಿಕ್ಕಟ್ಟು ಇನ್ನು ಬಗೆಹರಿದಂತೆ ಕಾಣುತ್ತಿಲ್ಲ. ಇಂದು ಕೇರಳಂನ ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡಲಾಗುವುದು ಎನ್ನಲಾಗಿತ್ತು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿದ್ದಾರೆ.

ಇದಾದ ಬಳಿಕ ಕಾಂಗ್ರೆಸ್ ಕೇರಳಂನ ಮುಖ್ಯಮಂತ್ರಿ ಹೆಸರನ್ನು ಘೋಷಿಸುವ ನಿರೀಕ್ಷೆಯಿತ್ತು. ಆದರೆ, ಮತ್ತೊಮ್ಮೆ ಸಿಎಂ ಹೆಸರು ಘೋಷಣೆ ಮುಂದೂಡಲ್ಪಟ್ಟಿದೆ. ಇಂದಿನ ಸಭೆಯಲ್ಲಿ ಸಿಎಂ ಹೆಸರು ಅಂತಿಮವಾಗಿದ್ದು, ನಾಳೆ ಅಧಿಕೃತವಾಗಿ ಹೆಸರು ಘೋಷಿಸಲಾಗುವುದು ಎಂದು ತಿಳಿದು ಬಂದಿದೆ.
ಕೇರಳಂನಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್, ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಸಿಎಂ ರೇಸ್ನಲ್ಲಿದ್ದವು. ಕೇರಳದ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಆದರೂ ಇನ್ನೂ ಸರ್ಕಾರ ರಚನೆಗೆ ಮುಹೂರ್ತ ನಿಗದಿಯಾಗಿಲ್ಲ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳಂನಲ್ಲಿ 140 ವಿಧಾನಸಭಾ ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದುಕೊಂಡಿತು.