ಬೆಂಗಳೂರು, ಮೇ. 13 (DaijiworldNews/AK):ಪ್ರಧಾನಿಯವರು ದೇಶದ ಹಿತದೃಷ್ಟಿಯಿಂದ ಕೆಲವು ಸಲಹೆಗಳನ್ನು ನೀಡಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ವಿರೋಧ ಮಾಡುವುದನ್ನು ಕೈಬಿಡಬೇಕು ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಅವರು ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಹೇಳಿಕೆ ಗಮನಿಸಿ ಅನೇಕ ಕಂಪೆನಿಗಳು ವಾರದಲ್ಲಿ 3 ದಿನ ಮನೆಯಿಂದಲೇ ಕೆಲಸ ಮಾಡಿಸುವುದಾಗಿ ಮುಂದೆ ಬರುತ್ತಿವೆ ಎಂದು ತಿಳಿಸಿದರು. ಅನುಭವಿ ರಾಜಕಾರಣಿ ಬಿ.ಕೆ.ಹರಿಪ್ರಸಾದ್ ಅವರು ಅಪ್ರಬುದ್ಧ ಹಾಗೂ ಅತ್ಯಂತ ಹಗುರವಾದ ಹೇಳಿಕೆ ಕೊಡುತ್ತಾರೆ. ಅವರ ಬಗ್ಗೆ ಹೇಳಿಕೆ ಕೊಡುವುದರಲ್ಲಿ ಏನೇನೂ ಅರ್ಥ ಇಲ್ಲ ಎಂದು ನುಡಿದರು.
ಪೆಟ್ರೋಲಿಯಂ ಉತ್ಪನ್ನ, ಗ್ಯಾಸ್ ಬಳಕೆ ಕಡಿಮೆ ಮಾಡಿ, ಒಂದು ವರ್ಷ ಕಾಲ ಚಿನ್ನ ಖರೀದಿಯನ್ನು ಅಗತ್ಯವಿದ್ದರೆ ಮಾತ್ರ ಕಡಿಮೆ ಮಾಡಿ, ಸಾಮೂಹಿಕ ಸಾರಿಗೆ ವ್ಯವಸ್ಥೆ ಬಳಸಿ ಎಂದು ಪ್ರಧಾನಿಯವರು ಹೇಳಿದ್ದಾರೆ. ಇದರ ಉದ್ದೇಶ ಜನರಿಗೆ ತೊಂದರೆ ಕೊಡುವುದಲ್ಲ; ಯುದ್ಧದ ಕಾರಣ ಪೆಟ್ರೋಲಿಯಂ ಉತ್ಪನ್ನ, ಗ್ಯಾಸ್ ಸರಿಯಾಗಿ ಬರುತ್ತಿಲ್ಲ; ಮಾತುಕತೆ ಸರಿಯಾಗಿ ನಡೆಯದೆ ಯುದ್ಧ ನಿಲ್ಲುತ್ತಿಲ್ಲ ಎಂದು ಗಮನಕ್ಕೆ ತಂದರು. ಪ್ರಧಾನಿಯವರ ಕರೆಗೆ ಜನರು, ಸರಕಾರಗಳೂ ಸ್ಪಂದಿಸುತ್ತಿವೆ. ಕೇಂದ್ರವನ್ನು ಟೀಕಿಸಬೇಕು; ವಿರೋಧಿಸಬೇಕೆಂಬ ಚಾಳಿ ಇರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದವರು ಇದನ್ನು ವಿರೋಧಿಸುವ ಮನಸ್ಥಿತಿ ಹೊಂದಿದ್ದಾರೆ ಎಂದು ಟೀಕಿಸಿದರು.
ನಮ್ಮ ದೇಶದ ಅರ್ಥವ್ಯವಸ್ಥೆ, ಜನರ ಉದ್ಯೋಗ ಮತ್ತು ವಿದೇಶಿ ವಿನಿಮಯವನ್ನು ಕಾಪಾಡಲು ಪ್ರಧಾನಿಯವರ ಕರೆ ಸ್ವಾಗತಾರ್ಹ. ಜನರು ಇದನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.