ಬೆಂಗಳೂರು, ಮೇ. 13 (DaijiworldNews/AA): ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಪ್ರತಿಭಾವಂತ ನಟ ಮತ್ತು ಯಶಸ್ವಿ ನಿರ್ಮಾಪಕರಾದ ನಟ ದಿಲೀಪ್ ರಾಜ್(47) ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ದಿಲೀಪ್ ರಾಜ್ಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ದಿಲೀಪ್ ರಾಜ್ ಅವರ ಅಕಾಲಿಕ ನಿಧನಕ್ಕೆ ಸ್ಯಾಂಡಲ್ವುಡ್ ಕಲಾವಿದರು, ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.
ದಿಲೀಪ್ ಅವರು 2005ರಲ್ಲಿ ಬಿಡುಗಡೆಯಾದ ಬಾಯ್ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ದಿಲೀಪ್ ಅವರು ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು.
ಸುಗ್ರೀವ, ಗೆಳೆಯ, ಯೂಟರ್ನ್, ಮಿಲನ, ಲವ್ ಮಾಕ್ಟೇಲ್ 3 ಸೇರಿದಂತೆ 28 ಚಿತ್ರಗಳಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ. ಅಲ್ಲದೇ ಮನೆಯೊಂದು ಮೂರು ಬಾಗಿಲು, ರಥಸಪ್ತಮಿ, ಪ್ರೀತಿಗಾಗಿ, ಹಿಟ್ಲರ್ ಕಲ್ಯಾಣ ಸೇರಿದಂತೆ ಹಲವಾರು ಧಾರವಾಹಿಗಳಲ್ಲೂ ನಟಿಸಿ ಹೆಸರುವಾಸಿಯಾಗಿದ್ದರು. ಸದ್ಯ ಜನಪ್ರಿಯ ಧಾರಾವಾಹಿ 'ಕೃಷ್ಣ ರುಕ್ಕು' ನಿರ್ಮಾಣ ಮಾಡುತ್ತಿದ್ದರು.