ನವದೆಹಲಿ, ಮೇ. 13 (DaijiworldNews/AA): ಚಿನ್ನ ಮತ್ತು ಬೆಳ್ಳಿ ಮೇಲಿನ ಒಟ್ಟು ಒಟ್ಟು ಆಮದು ಸುಂಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ 15% ಕ್ಕೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಮತ್ತು ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮೂಲ ಕಸ್ಟಮ್ಸ್ ಸುಂಕ ಈ ಹಿಂದೆ 5% ಇತ್ತು. ಈಗ ಇದನ್ನು 10%ಗೆ ಏರಿಕೆ ಮಾಡಲಾಗಿದೆ. ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಈ ಹಿಂದೆ 5% ಇತ್ತು. ಈ ಸೆಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಮೂಲ ಕಸ್ಟಮ್ಸ್ ಸುಂಕ 5% ಏರಿಕೆ ಮಾಡಿದ್ದರಿಂದ ಒಟ್ಟು ಆಮದು ಸುಂಕ 15% ಏರಿಕೆಯಾಗಿದೆ.
ಭಾರತದಲ್ಲಿ ಚಿನ್ನದ ಹೂಡಿಕೆ ಮತ್ತು ಖರೀದಿ ತೀವ್ರವಾಗಿ ಹೆಚ್ಚಿದ್ದರಿಂದ ಆಮದು ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸುಂಕ ಏರಿಕೆ ಮಾಡಿದೆ. ಇನ್ನು ಆಮದು ಸುಂಕ ಹೆಚ್ಚಾದ ಬೆನ್ನಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತಕ್ಷಣವೇ ದುಬಾರಿಯಾಗಲಿವೆ. ಮುಂಬರುವ ಹಬ್ಬ ಹಾಗೂ ಮದುವೆ ಸೀಸನ್ಗಳಲ್ಲಿ ಆಭರಣ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಚಾರ್ಜ್ ಹಾಗೂ ಜಿಎಸ್ಟಿ ಜೊತೆಗೆ ಈ ಹೆಚ್ಚುವರಿ ಸುಂಕವೂ ತೆರಬೇಕಾಗಿದೆ.