ಚೆನ್ನೈ, ಮೇ. 12 (DaijiworldNews/AA): ಜನರನ್ನು ವಿಭಜಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು. ತಮಿಳುನಾಡಿನಿಂದ ಸನಾತನ ಧರ್ಮವನ್ನು ಸಂಪೂರ್ಣ ನಾಶ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಅವರು, "ನಿನ್ನೆ, ನಮ್ಮ ನಾಯಕ ಮತ್ತು ಇತರ ಅನೇಕ ನಾಯಕರಿಂದ ಮುಖ್ಯಮಂತ್ರಿಗಳಿಗೆ ಶುಭಾಶಯಗಳು ಬಂದವು. ಈ ರಾಜಕೀಯ ನಾಗರಿಕತೆಯು ಈ ಸದನದಲ್ಲಿಯೂ ಮುಂದುವರಿಯಬೇಕು. ಆಡಳಿತ ಸರ್ಕಾರ ಮತ್ತು ವಿರೋಧ ಪಕ್ಷವಾಗಿ ನಾವು ಬೇರೆ ಬೇರೆ ಸಾಲುಗಳಲ್ಲಿ ಕುಳಿತಿದ್ದರೂ, ತಮಿಳುನಾಡಿನ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು" ಎಂದಿದ್ದಾರೆ.
"ಮುಖ್ಯಮಂತ್ರಿ ಮತ್ತು ನಾನು ಒಂದೇ ಕಾಲೇಜಿನಲ್ಲಿ ಓದಿದ್ದೇವೆ. ನಾವು ನಮ್ಮ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳಲು ಬಯಸುತ್ತೇವೆ. ಮುಖ್ಯಮಂತ್ರಿ ನಮ್ಮ ಸಲಹೆಗಳನ್ನು ಸಹ ಸ್ವೀಕರಿಸಬೇಕು" ಎಂದು ಹೇಳಿದರು.