ಕೋಲ್ಕತ್ತಾ, ಮೇ. 12 (DaijiworldNews/AA): ಪಶ್ಚಿಮ ಬಂಗಾಳದ ಬಿಜೆಪಿ ನಾಯಕ, ನೂತನ ಸಿಎಂ ಸುವೇಂದು ಅಧಿಕಾರಿ ಆಪ್ತ ಕಾರ್ಯದರ್ಶಿ ಚಂದ್ರನಾಥ್ ರಥ್ ಹತ್ಯೆ ಪ್ರಕರಣವನ್ನು ಇದೀಗ ಸಿಬಿಐಗೆ ವರ್ಗಾವಣೆ ಮಾಡಲಾಗಿದೆ.

ಮೇ 6ರಂದು ರಾತ್ರಿ ಕೋಲ್ಕತ್ತಾದ ಮಧ್ಯಾಮಗ್ರಾಮ್ ಸಮೀಪದ ಜೆಸೋರ್ ರಸ್ತೆಯಲ್ಲಿ ಚಂದ್ರನಾಥ್ ಅವರು ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಆರೋಪಿಗಳ ಪತ್ತೆಗಾಗಿ ಎಸ್ಐಟಿ ರಚಿಸಲಾಗಿತ್ತು. ಇದೀಗ ಈ ಪ್ರಕರಣದ ತನಿಖೆಯನ್ನು ಪಶ್ಚಿಮ ಬಂಗಾಳ ಪೊಲೀಸರಿಂದ ಸಿಬಿಐ ತನಿಖೆಗೆ ವಹಿಸಲಾಗಿದೆ.
ಆರೋಪಿಗಳು ಟೋಲ್ ಪ್ಲಾಜಾದಲ್ಲಿ ಯುಪಿಐ ಮೂಲಕ ಟೋಲ್ ಹಣ ಪಾವತಿಸಿದ್ದರು. ಈ ಡಿಜಿಟಲ್ ಹಣ ವರ್ಗಾವಣೆಯ ದಾಖಲೆಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳು ಸೋಮವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೃತ್ಯದ ವೇಳೆ ಆರೋಪಿಗಳು ಬಳಸಿದ್ದ ಸಿಲ್ವರ್ ಬಣ್ಣದ ನಿಸ್ಸಾನ್ ಮೈಕ್ರಾ ಕಾರು ಕೋಲ್ಕತ್ತಾ ಸಮೀಪದ ಬಾಲಿ ಟೋಲ್ ಪ್ಲಾಜಾವನ್ನು ಹಾದುಹೋಗಿತ್ತು. ಅಲ್ಲಿ ಆರೋಪಿಗಳು ಯುಪಿಐ ಮೂಲಕ ಹಣ ಪಾವತಿಸಿದ್ದರು. ಇನ್ನು ಕಾರಿನ ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಎಸ್ಐಟಿ ಅಧಿಕಾರಿಗಳು ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.