ಬೆಂಗಳೂರು, ಮೇ. 12 (DaijiworldNews/TA): ಐಟಿ ವೃತ್ತಿಪರರಾಗಿರುವ ಬೆಂಗಳೂರಿನ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ದಂಪತಿ ಐತಿಹಾಸಿಕ ರಾಮ ಸೇತು ಮಾರ್ಗದಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ತೆರೆದ ಸಮುದ್ರದಲ್ಲಿ ಈಜಿ ಬಂದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪಾಕ್ ಜಲಸಂಧಿಯನ್ನು ದಾಟಿ ಈ ಸಾಧನೆ ಮಾಡಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

10 ಗಂಟೆ 45 ನಿಮಿಷಗಳ ಕಠಿಣ ಸಾಹಸ : ಮೇ 7ರಂದು ಬೆಳಗಿನ ಜಾವ 4:30ಕ್ಕೆ ಶ್ರೀಲಂಕಾದ ತಲೈಮನ್ನಾರ್ನಿಂದ ಈಜು ಆರಂಭಿಸಿದ ದಂಪತಿ, ಸುಮಾರು 32 ಕಿಲೋಮೀಟರ್ ದೂರವನ್ನು ಕ್ರಮಿಸಿ ಮಧ್ಯಾಹ್ನ 3:15ಕ್ಕೆ ತಮಿಳುನಾಡಿನ ಧನುಷ್ಕೋಡಿಗೆ ತಲುಪಿದರು. ಒಟ್ಟು 10 ಗಂಟೆ 45 ನಿಮಿಷಗಳ ಕಾಲ ನಡೆದ ಈ ಸಾಹಸದಲ್ಲಿ ಅವರು ಬಿರುಸಿನ ಅಲೆಗಳು, ಬಲವಾದ ಸಮುದ್ರ ಪ್ರವಾಹಗಳು ಹಾಗೂ ಬದಲಾಗುತ್ತಿದ್ದ ಗಾಳಿಯ ನಡುವೆ ಹೋರಾಡುತ್ತಾ ಗುರಿ ಮುಟ್ಟಿದರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ, ಸೂರ್ಯೋದಯಕ್ಕೂ ಮುನ್ನ ಕತ್ತಲೆಯ ಸಮುದ್ರಕ್ಕೆ ಧುಮುಕಲು ಸಜ್ಜಾಗುತ್ತಿರುವ ಅಬ್ದಿ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲವು ದೃಶ್ಯಗಳಲ್ಲಿ ದಂಪತಿ ಪ್ರಕ್ಷುಬ್ಧ ಸಮುದ್ರದ ನಡುವೆ ಗಂಟೆಗಳ ಕಾಲ ಈಜುತ್ತಿರುವುದು ದಾಖಲಾಗಿದೆ. ಪ್ರಬಲ ಸಾಗರ ಪ್ರವಾಹಗಳು ಅವರನ್ನು ಪದೇಪದೇ ದಿಕ್ಕು ತಪ್ಪಿಸಲು ಪ್ರಯತ್ನಿಸಿದರೂ, ಇಬ್ಬರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಪ್ರಯಾಣ ಮುಂದುವರಿಸಿದರು.
ಕರಾವಳಿ ರಕ್ಷಣಾ ಪಡೆಯ ಕಟ್ಟುನಿಟ್ಟಿನ ಭದ್ರತೆ : ಈ ದಂಡಯಾತ್ರೆ ಸಂಪೂರ್ಣ ಸುರಕ್ಷತಾ ಮೇಲ್ವಿಚಾರಣೆಯಲ್ಲೇ ನಡೆಯಿತು. ಸಹಾಯಕ ದೋಣಿಗಳು, ವೈದ್ಯ ಸಿಬ್ಬಂದಿ ಹಾಗೂ ಭಾರತೀಯ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಮಾರ್ಗದುದ್ದಕ್ಕೂ ಈಜುಗಾರರ ಜೊತೆಗಿದ್ದರು.
“ನಾವು ಶ್ರೀಲಂಕಾದಿಂದ ಭಾರತಕ್ಕೆ ಈಜುವ ಮತ್ತು ಅದನ್ನು ಸಾಧಿಸಿದ ಮೊದಲ ದಂಪತಿಗಳಾಗುವ ದಿನ ಇದು. ಹಲವು ತಿಂಗಳ ತರಬೇತಿ ಮತ್ತು ಸಿದ್ಧತೆಯ ಪರೀಕ್ಷೆ ಈ ಈಜು. ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ಭಾವಿಸುತ್ತೇವೆ,” ಎಂದು ದಂಪತಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಇಬ್ಬರೂ ಬೆಂಗಳೂರಿನ ಸಾಫ್ಟ್ವೇರ್ ವೃತ್ತಿಪರರು. ಕೇವಲ ನಾಲ್ಕು ವರ್ಷಗಳ ಹಿಂದಷ್ಟೇ ಗಂಭೀರ ಈಜು ತರಬೇತಿ ಆರಂಭಿಸಿದ್ದ ಅವರು, ಇದೀಗ ಅಂತಾರಾಷ್ಟ್ರೀಯ ಮಟ್ಟದ ಸಾಹಸ ಸಾಧನೆ ಮಾಡಿದ್ದಾರೆ.
ಅವರ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕರು ಅವರ ಸಹಿಷ್ಣುತೆ, ಶಿಸ್ತು ಮತ್ತು ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಸಂಪೂರ್ಣ ಸಾಹಸವನ್ನು ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ದಾಖಲಿಸಿಕೊಂಡಿದ್ದು, ಯುವ ಕ್ರೀಡಾಪಟುಗಳು ಮತ್ತು ಸಾಹಸಪ್ರಿಯರಿಗೆ ಸ್ಫೂರ್ತಿಯಾಗಿದೆ.
ಭಾರತೀಯ ಓಪನ್ ವಾಟರ್ ಸ್ವಿಮ್ಮಿಂಗ್ ಕ್ಷೇತ್ರದಲ್ಲಿ ಈ ಸಾಧನೆಯನ್ನು ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಗುತ್ತಿದ್ದು, ಶ್ರೀಲಂಕಾದಿಂದ ಭಾರತಕ್ಕೆ ತೆರೆದ ಸಮುದ್ರದಲ್ಲಿ ಯಶಸ್ವಿಯಾಗಿ ಈಜಿ ಬಂದ ಮೊದಲ ದಂಪತಿ ಎಂಬ ಹೊಸ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ.