ನವದೆಹಲಿ, ಮೇ. 12 (DaijiworldNews/AK): ಮೇ 3 ರಂದು ನಡೆದ ನೀಟ್ ಯುಜಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ರದ್ದುಗೊಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಎನ್ಟಿಎ ಪರೀಕ್ಷೆಯನ್ನು ರದ್ದುಗೊಳಿಸಿದ್ದು ಶೀಘ್ರವೇ ಬದಲಿ ದಿನಾಂಕವನ್ನು ತಿಳಿಸುವುದಾಗಿ ಹೇಳಿದೆ.

ಹೊಸ ಪರೀಕ್ಷಾ ದಿನಾಂಕ ಮತ್ತು ಹೊಸ ಪ್ರವೇಶ ಪತ್ರಗಳ ಮಾಹಿತಿಯನ್ನು ಶೀಘ್ರದಲ್ಲೇ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಮರು ಪರೀಕ್ಷೆಗೆ ವಿದ್ಯಾರ್ಥಿಗಳು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಈ ಹಿಂದೆ ಮಾಡಿದ ಶುಲ್ಕ ಪಾವತಿಗಳನ್ನು ಮರುಪಾವತಿಸಲಾಗುತ್ತದೆ. ವಿದ್ಯಾರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವೂ ಇಲ್ಲ. ಹಳೆಯ ದಾಖಲಾತಿಗಳು ಮತ್ತು ಆಯ್ದ ಪರೀಕ್ಷಾ ಕೇಂದ್ರಗಳು ಮಾನ್ಯವಾಗಿರುತ್ತವೆ.
ರಾಜಸ್ಥಾನದ ಸಿಕಾರ್ನಲ್ಲಿ ಮೇ 1 ರಂದೇ ‘ಊಹೆ ಪತ್ರಿಕೆ’ ರೂಪದಲ್ಲಿ ಪ್ರಶ್ನೆಗಳು ಪ್ರಸಾರವಾಗಿದ್ದವು ಎಂದು ವರದಿಯಾಗಿದೆ. ಈ ಊಹೆ ಪತ್ರಿಕೆಯಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡವು ಈ ಆಪಾದಿತ ಅವ್ಯವಹಾರಗಳ ಕುರಿತು ತನಿಖೆ ಆರಂಭಿಸಿದೆ. ಸೋರಿಕೆಯಾದ ಮಾಹಿತಿ ಸಿಕ್ಕಿದ ಕೂಡಲೇ ಎನ್ಟಿಎ ಇದನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿತ್ತು.
2024 ಮತ್ತು 2025 ರಲ್ಲೂ ಇಂತಹದೇ ಆರೋಪಗಳು ಕೇಳಿಬಂದಿದ್ದವು. 2024ರ ಪ್ರಕರಣದಲ್ಲಿ ಸಿಬಿಐ ಪಾಟ್ನಾ ಮತ್ತು ಹಜಾರಿಬಾಗ್ನಲ್ಲಿ ಕೆಲವು ಆರೋಪಿಗಳನ್ನು ಬಂಧಿಸಿತ್ತು.
ಪರೀಕ್ಷೆ ಬರೆದಿದ್ದ ಸುಮಾರು 22.79 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಈ ನಿರ್ಧಾರದಿಂದ ಅನಾನುಕೂಲವಾಗುವುದನ್ನು ಒಪ್ಪಿಕೊಂಡಿರುವ ಎನ್ಟಿಎ, ಯಾವುದೇ ಗೊಂದಲಗಳಿದ್ದಲ್ಲಿ ಸಂಪರ್ಕಿಸಲು ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ
ಇಮೇಲ್: neet-ug@nta.ac.in ದೂರವಾಣಿ: 011-40759000 / 011-69227700