ಬೆಂಗಳೂರು, ಮೇ. 12 (DaijiworldNews/TA): ಪ್ರತಿ ರೋಗಿಯ ಚೇತರಿಕೆಯಲ್ಲಿ ವೈದ್ಯರಷ್ಟೇ ದಾದಿಯರ ಪಾತ್ರವೂ ಅತ್ಯಂತ ಮಹತ್ವದ್ದು. ಔಷಧಿ ಮತ್ತು ಚಿಕಿತ್ಸೆಯ ಜೊತೆಗೆ ರೋಗಿಗಳಿಗೆ ಸರಿಯಾದ ಆರೈಕೆ, ಕಾಳಜಿ ಹಾಗೂ ಮಾನಸಿಕ ಧೈರ್ಯ ನೀಡುವ ಮೂಲಕ ಅವರು ಆರೋಗ್ಯ ವ್ಯವಸ್ಥೆಯ ಆಧಾರಸ್ತಂಭರಾಗಿದ್ದಾರೆ. ಹಗಲು-ರಾತ್ರಿ ಎನ್ನದೆ ಸೇವೆ ಸಲ್ಲಿಸುವ ದಾದಿಯರ ನಿಸ್ವಾರ್ಥ ಸೇವೆಯನ್ನು ಗೌರವಿಸಲು ಪ್ರತಿವರ್ಷ ಮೇ 12ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸುವುದಕ್ಕೆ ವಿಶೇಷ ಇತಿಹಾಸವಿದೆ. ಆಧುನಿಕ ನರ್ಸಿಂಗ್ ವ್ಯವಸ್ಥೆಯ ಸ್ಥಾಪಕಿ ಎಂದೇ ಪ್ರಸಿದ್ಧರಾದ ಫ್ಲಾರೆನ್ಸ್ ನೈಟಿಂಗೇಲ್ ಅವರು 1820ರ ಮೇ 12ರಂದು ಜನಿಸಿದ್ದರು. ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ದಾದಿಯರ ಸೇವೆಯನ್ನು ಗೌರವಿಸುವ ಕಲ್ಪನೆಯನ್ನು ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ಡೊರೊಥಿ ಸದರ್ಲ್ಯಾಂಡ್ ಮೊದಲಿಗೆ ಪ್ರಸ್ತಾಪಿಸಿದ್ದರು. ಬಳಿಕ 1974ರಲ್ಲಿ ಇಂಟರ್ನ್ಯಾಶನಲ್ ಕೌನ್ಸಿಲ್ ಆಫ್ ನರ್ಸಸ್ (ICN) ಅಧಿಕೃತವಾಗಿ ಮೇ 12ರಂದು ಅಂತಾರಾಷ್ಟ್ರೀಯ ದಾದಿಯರ ದಿನ ಆಚರಣೆ ಪ್ರಾರಂಭಿಸಿತು.
ದಾದಿಯರು ಕೇವಲ ರೋಗಿಗಳ ಆರೈಕೆ ಮಾಡುವವರಲ್ಲ, ಅವರು ರೋಗಿಗಳಿಗೆ ಧೈರ್ಯ ತುಂಬುವ ಜೀವಂತ ಶಕ್ತಿಯಂತಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ದಾದಿಯರ ಪಾತ್ರ ಅಪಾರವಾಗಿದೆ.
ಅಂತಾರಾಷ್ಟ್ರೀಯ ದಾದಿಯರ ದಿನವು ಸಮಾಜಕ್ಕೆ ದಾದಿಯರ ಸೇವೆಯ ಮಹತ್ವವನ್ನು ನೆನಪಿಸುವ ದಿನವಾಗಿದ್ದು, ಅವರ ತ್ಯಾಗ, ಸಮರ್ಪಣೆ ಮತ್ತು ಪರಿಶ್ರಮಕ್ಕೆ ಗೌರವ ಸಲ್ಲಿಸುವ ಸಂದರ್ಭವೂ ಹೌದು.
ಈ ವಿಶೇಷ ದಿನದಂದು ವಿಶ್ವದಾದ್ಯಂತ ಆಸ್ಪತ್ರೆಗಳು, ಆರೋಗ್ಯ ಸಂಸ್ಥೆಗಳು ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ದಾದಿಯರನ್ನು ಸನ್ಮಾನಿಸುವ ಕಾರ್ಯಕ್ರಮಗಳು, ಜಾಗೃತಿ ಅಭಿಯಾನಗಳು, ಸೆಮಿನಾರ್ಗಳು ಮತ್ತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ರೋಗಿಗಳ ಜೀವ ಉಳಿಸಲು ತಮ್ಮ ಬದುಕನ್ನೇ ಸಮರ್ಪಿಸುವ ದಾದಿಯರ ಸೇವೆ ನಿಜಕ್ಕೂ ಸಮಾಜಕ್ಕೆ ಮಾದರಿಯಾಗಿದೆ.