ಬೆಂಗಳೂರು, ಮೇ. 12 (DaijiworldNews/TA): ಬಹುಕಾಲದಿಂದ ಚರ್ಚೆಯಲ್ಲಿದ್ದ ಕರ್ನಾಟಕ ಸರ್ಕಾರದ ಹೊಸ ಅಬಕಾರಿ ನೀತಿ ಇದೀಗ ಅಧಿಕೃತವಾಗಿ ಜಾರಿಗೆ ಬಂದಿದೆ. ಮೇ 11ರಿಂದ ಅನುಷ್ಠಾನಗೊಂಡಿರುವ ಈ ನೀತಿಯ ಮೂಲಕ ರಾಜ್ಯ ಸರ್ಕಾರ ದಶಕಗಳಷ್ಟು ಹಳೆಯ ತೆರಿಗೆ ವ್ಯವಸ್ಥೆಯನ್ನು ಬದಲಿಸಿ, ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ತೆರಿಗೆ ವಿಧಿಸುವ ಹೊಸ ಮಾದರಿಯನ್ನು ಅಳವಡಿಸಿಕೊಂಡಿದೆ. ಈ ರೀತಿಯ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

ಹಿಂದಿನ ಅಬಕಾರಿ ವ್ಯವಸ್ಥೆಯಲ್ಲಿ ಇದ್ದ 16 ತೆರಿಗೆ ಸ್ಲ್ಯಾಬ್ಗಳನ್ನು ಸರ್ಕಾರ ಈಗ 8ಕ್ಕೆ ಇಳಿಸಿದೆ. ಹೊಸ ನೀತಿಯ ಪ್ರಕಾರ ಕಡಿಮೆ ಬೆಲೆಯ ಮತ್ತು ಸಾಮಾನ್ಯ ಜನರು ಹೆಚ್ಚು ಬಳಸುವ ಮದ್ಯಗಳ ಮೇಲೆ ತೆರಿಗೆ ಹೆಚ್ಚಳವಾಗಿದ್ದು, ಪ್ರೀಮಿಯಂ ಮತ್ತು ವಿದೇಶಿ ಬ್ರಾಂಡ್ಗಳ ಮದ್ಯಗಳಿಗೆ ತೆರಿಗೆ ಕಡಿತ ಮಾಡಲಾಗಿದೆ.
ಹೊಸ ಅಬಕಾರಿ ನೀತಿಯ ಪರಿಣಾಮವಾಗಿ ಸಾಮಾನ್ಯ ಜನರು ಬಳಸುವ ವಿಸ್ಕಿ, ರಮ್, ಬ್ರಾಂಡಿ ಹಾಗೂ ವೋಡ್ಕಾ ಮದ್ಯಗಳ ಬೆಲೆ ಏರಿಕೆಯಾಗಲಿದೆ. ವಿಶೇಷವಾಗಿ 180 ಮಿ.ಲೀ ಕ್ವಾರ್ಟರ್ ಬಾಟಲಿ ಮತ್ತು ಟೆಟ್ರಾ ಪ್ಯಾಕ್ಗಳ ದರದಲ್ಲಿ ಶೇ 20 ರಿಂದ 30ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ (KBDA) ಪ್ರಕಾರ, ಮೊದಲ ಐದು ಸ್ಲ್ಯಾಬ್ಗಳಲ್ಲಿ ಹೆಚ್ಚುವರಿ ಅಬಕಾರಿ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕಳೆದ ವರ್ಷ ರೂ. 63 ಇದ್ದ ಕೆಲವು ಕ್ವಾರ್ಟರ್ ಬಾಟಲಿಗಳ ಬೆಲೆ ಈಗಾಗಲೇ ರೂ.80ಕ್ಕೆ ಏರಿಕೆಯಾಗಿದ್ದು, ಹೊಸ ನೀತಿಯ ಬಳಿಕ ಅದು ರೂ.105ರ ಗಡಿ ತಲುಪುವ ಸಾಧ್ಯತೆ ಇದೆ.
ಪ್ರೀಮಿಯಂ ಮದ್ಯಗಳಿಗೆ ಬೆಲೆ ಇಳಿಕೆ : ಇನ್ನೊಂದೆಡೆ, ಪ್ರೀಮಿಯಂ ಮತ್ತು ವಿದೇಶಿ ಬ್ರಾಂಡ್ಗಳ ಮದ್ಯಗಳಿಗೆ ಹೊಸ ನೀತಿಯಿಂದ ಲಾಭವಾಗಲಿದೆ. ಡಿಯಾಜಿಯೊ, ಪೆರ್ನಾಡ್ ರಿಕಾರ್ಡ್ ಹಾಗೂ ಯುನೈಟೆಡ್ ಸ್ಪಿರಿಟ್ಸ್ನಂತಹ ಕಂಪನಿಗಳ ಉತ್ಪನ್ನಗಳ ಬೆಲೆ ಶೇ 16 ರಿಂದ 20ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ.
6ರಿಂದ 8ನೇ ಸ್ಲ್ಯಾಬ್ನ ಮದ್ಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಸರ್ಕಾರ ಶೇ 10ರಿಂದ 15ರಷ್ಟು ಕಡಿತಗೊಳಿಸಿರುವುದು ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲಕರವಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ರಾಜ್ಯದ ಹೊಸ ನೀತಿಯಿಂದ ಸಣ್ಣ ಮತ್ತು ಪ್ರಾದೇಶಿಕ ಮದ್ಯ ತಯಾರಿಕಾ ಘಟಕಗಳಿಗೆ ದೊಡ್ಡ ಹೊಡೆತ ಬೀಳುವ ಭೀತಿ ವ್ಯಕ್ತವಾಗಿದೆ. ದೊಡ್ಡ ಕಂಪನಿಗಳು ಬೆಲೆ ಬದಲಾವಣೆಗಳನ್ನು ನಿರ್ವಹಿಸಬಲ್ಲವು. ಆದರೆ ಕಡಿಮೆ ಬೆಲೆಯ ಮದ್ಯದ ಮೇಲೆಯೇ ಅವಲಂಬಿತವಾಗಿರುವ ಸ್ಥಳೀಯ ಘಟಕಗಳು ವ್ಯವಹಾರ ಕುಸಿತ ಎದುರಿಸಬೇಕಾಗಬಹುದು ಎಂದು ಕೆಬಿಡಿಎ ಎಚ್ಚರಿಸಿದೆ.
ರಾಜ್ಯದ ಅಬಕಾರಿ ಆದಾಯದಲ್ಲಿ ಶೇ 70ರಿಂದ 75ರಷ್ಟು ಪಾಲು ಸಾಮಾನ್ಯ ಮದ್ಯಗಳಿಂದಲೇ ಬರುತ್ತದೆ. ಇದೇ ವಿಭಾಗದ ಮೇಲೆ ತೆರಿಗೆ ಹೆಚ್ಚಳ ಮಾಡಿರುವುದು ಸರ್ಕಾರದ ಆದಾಯ ಹೆಚ್ಚಿಸುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇದರ ನೇರ ಪರಿಣಾಮ ಮಧ್ಯಮ ಮತ್ತು ಕಡಿಮೆ ಆದಾಯ ವರ್ಗದ ಮದ್ಯ ಗ್ರಾಹಕರ ಮೇಲೆಯೇ ಬೀಳಲಿದೆ ಎಂಬ ಚರ್ಚೆ ಜೋರಾಗಿದೆ.