ಅಗರ್ತಲಾ, ಮೇ. 11 (DaijiworldNews/AA): ತ್ರಿಪುರದ ಭಾರತ-ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯಲ್ಲಿ ಇಬ್ಬರು ಶಂಕಿತ ಬಾಂಗ್ಲಾದೇಶಿ ಕಳ್ಳಸಾಗಣೆದಾರರನ್ನು ಗಡಿ ಭದ್ರತಾ ಪಡೆಯ ಸಿಬ್ಬಂದಿ ಎನ್ಕೌಂಟರ್ ಮಾಡಿದ್ದಾರೆ.

ಭದ್ರತಾ ಪಡೆಗಳ ದಾಳಿಗೆ ನಬೀರ್ ಹುಸೇನ್ (40) ಮತ್ತು ಎಂಡಿ ಮುರ್ಸಲಿನ್ (22) ಮೃತಪಟ್ಟಿರುವುದಾಗಿ ಗುರುತಿಸಲಾಗಿದೆ.
ಬಿಎಸ್ಎಫ್ ಪಡೆಗಳು ಗಸ್ತಿನಲ್ಲಿದ್ದಾಗ ಶಂಕಿತ ಬಾಂಗ್ಲಾದೇಶಿ ಕಳ್ಳಸಾಗಣೆದಾರರ ಗುಂಪು ಕಳ್ಳಸಾಗಣಿಕೆ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ವೇಳೆ ಗಡಿಯ ಕಡೆಗೆ ಹೋಗದಂತೆ ಭದ್ರತಾ ಪಡೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಆದರೂ ಎಚ್ಚರಿಕರಯನ್ನು ನಿರ್ಲಕ್ಷಿಸಿ ಕಳ್ಳಸಾಗಣಿಕೆ ದಾರರು ಗಡಿಯ ಕಡೆ ಸಾಗಿದ್ದರು. ಅಲ್ಲದೇ ಬಿಎಸ್ಎಫ್ ಸಿಬ್ಬಂದಿಯ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ.
ಆರಂಭದಲ್ಲಿ ಸಂಯಮದಿಂದ ನಡೆದುಕೊಂಡ ಭದ್ರತಾ ಪಡೆ ಸಿಬ್ಬಂದಿ, ಪರಿಸ್ಥಿತಿ ಕೈಮೀರಿದಾಗ ಆತ್ಮರಕ್ಷಣೆಗಾಗಿ ಕೆಲವು ಸುತ್ತು ಗುಂಡು ಹಾರಿಸಿದರು ಇದರಿಂದಾಗಿ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಇಬ್ಬರೂ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಗಡಿಯಲ್ಲಿ ಎರಡೂ ದೇಶಗಳ ಅಧಿಕಾರಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.