ಕೋಲ್ಕತಾ, ಮೇ. 11 (DaijiworldNews/AA): ಪಶ್ಚಿಮ ಬಂಗಾಳದ ಬಿಜೆಪಿ ನಾಯಕ, ಸಿಎಂ ಸುವೇಂದು ಅಧಿಕಾರಿ ಆಪ್ತ ಕಾರ್ಯದರ್ಶಿ ಚಂದ್ರನಾಥ್ ರಥ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ.

ವಿಶಾಲ್ ಶ್ರೀವಾಸ್ತವ, ರಾಜ್ ಸಿಂಗ್ ಮತ್ತು ಮಯಂಕ್ ಮಿಶ್ರಾ ಬಂಧಿತ ಆರೋಪಿಗಳು.
ಕೋಲ್ಕತ್ತಾದ ಮಧ್ಯಾಮಗ್ರಾಮ್ ಸಮೀಪದ ಜೆಸೋರ್ ರಸ್ತೆಯಲ್ಲಿ ಚಂದ್ರನಾಥ್ ಅವರು ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಆರೋಪಿಗಳು ಬಳಸಿದ್ದ ಸಿಲ್ವರ್ ಬಣ್ಣದ ನಿಸ್ಸಾನ್ ಮೈಕ್ರಾ ಕಾರು ಕೋಲ್ಕತ್ತಾ ಸಮೀಪದ ಬಾಲಿ ಟೋಲ್ ಪ್ಲಾಜಾವನ್ನು ಹಾದುಹೋಗಿತ್ತು. ಅಲ್ಲಿ ಕಾರಿನಲ್ಲಿದ್ದವರು ಯುಪಿಐ ಮೂಲಕ ಟೋಲ್ ಹಣ ಪಾವತಿಸಿದ್ದರು.
ಈ ಡಿಜಿಟಲ್ ಹಣ ವರ್ಗಾವಣೆಯ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಆ ಹಣ ಯಾರ ಖಾತೆಯಿಂದ ಹೋಗಿದೆ ಎಂಬ ಮಾಹಿತಿ ದೊರೆತಿದೆ. ಯುಪಿಐ ಪಾವತಿಯ ಸಮಯ ಮತ್ತು ಟೋಲ್ ಗೇಟ್ನ ಸಿಸಿಟಿವಿ ದೃಶ್ಯಗಳನ್ನು ಹೋಲಿಕೆ ಮಾಡಿದಾಗ ಆರೋಪಿಗಳ ಚಲನವಲನ ತಿಳಿದುಬಂದಿದೆ.
ಕಾರಿನ ನಂಬರ್ ಪ್ಲೇಟ್ ಆಧರಿಸಿ ತನಿಖೆ ನಡೆಸಿದಾಗ, ಅದು ಸಿಲಿಗುರಿಯ ವ್ಯಕ್ತಿಯೊಬ್ಬರ ಹೆಸರಿನಲ್ಲಿರುವುದು ತಿಳಿದುಬಂದಿದೆ. ಆ ವ್ಯಕ್ತಿ ಕಾರನ್ನು ಮಾರಾಟಕ್ಕಿಟ್ಟಾಗ ಉತ್ತರ ಪ್ರದೇಶದ ಕೆಲವು ವ್ಯಕ್ತಿಗಳು ಸಂಪರ್ಕಿಸಿದ್ದರು. ಸದ್ಯ ಪೊಲೀಸರ ತಂಡಗಳು ಯುಪಿ ಮತ್ತು ಬಿಹಾರಕ್ಕೆ ತೆರಳಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.