ಬೆಂಗಳೂರು, ಮೇ. 11 (DaijiworldNews/AA): ತಮಿಳುನಾಡು ಸಿಎಂ ಆಗಿ ವಿಜಯ್ ದಳಪತಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಕರೆ ಮಾಡಿ, ಶುಭಾಶಯ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ವಿಜಯ್ಗೆ ಕರೆ ಮಾಡಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, "ನಾನು ಸಿದ್ದರಾಮಯ್ಯ ಮಾತಾಡ್ತಿದ್ದೀನಿ. ಇತಿಹಾಸ ಸೃಷ್ಟಿ ಮಾಡಿದ ನಿಮಗೆ ಅಭಿನಂದನೆಗಳು. ಬೆಂಗಳೂರಿಗೆ ಬಂದಾಗ ಇಬ್ಬರು ಭೇಟಿಯಾಗೋಣ" ಎಂದಿದ್ದಾರೆ.
"ಜಾತ್ಯತೀತತೆ, ಸಾಂವಿಧಾನಿಕ ಮೌಲ್ಯಗಳನ್ನು ಮುನ್ನಡೆಸಲು ಹಾಗೂ ವಿಭಜಕ ಮತ್ತು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧದ ಸಾಮೂಹಿಕ ಹೋರಾಟಕ್ಕಾಗಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ತಮಿಳುನಾಡಿನ ಜನರ ಸೇವೆಯಲ್ಲಿ ವಿಜಯ್ ಅವರ ಅಧಿಕಾರಾವಧಿಯು ಯಶಸ್ವಿ ಮತ್ತು ಪರಿವರ್ತನೆಯ ಹಾದಿಯಾಗಲಿ" ಎಂದು ಹೇಳಿದ್ದಾರೆ.
ಎಕ್ಸ್ನಲ್ಲಿ ಶುಭಾಶಯ ಕೋರಿದ ಸಿಎಂ ಸಿದ್ದರಾಮಯ್ಯ, "ಸಿನಿಮಾ ಪ್ರಪಂಚದಿಂದ ಜನಸೇವೆಯತ್ತ ಗಮನಾರ್ಹ ಪ್ರಜಾಪ್ರಭುತ್ವ ಪ್ರಯಾಣ ಬೆಳೆಸುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಶೀ ಜೋಸೆಫ್ ವಿಜಯ್ ಅವರಿಗೆ ಅಭಿನಂದನೆಗಳು. ಕರ್ನಾಟಕ ಮತ್ತು ತಮಿಳುನಾಡು ನಡುವೆ ಜನರ ಅಭಿವೃದ್ಧಿ, ಸಾಂಸ್ಕೃತಿಕ ಬಾಂಧವ್ಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡೋಣ. ತಮಿಳುನಾಡಿನ ಜನರ ಸೇವೆಯಲ್ಲಿ ಯಶಸ್ವಿ ಮತ್ತು ಪರಿವರ್ತನಾತ್ಮಕ ಆಡಳಿತ ನೀಡಲು ಶುಭಾಶಯ" ಎಂದು ಪೋಸ್ಟ್ ಮಾಡಿದ್ದಾರೆ.